ಡೈಲಿ ವಾರ್ತೆ:02 ಆಗಸ್ಟ್ 2023

ವರದಿ: ವಿದ್ಯಾಧರ ಮೊರಬಾ

ಮತಗಟ್ಟೆ ಅಧಿಕಾರಿಯಾಗಿ ನೀಡಿದ ಜವಾಬ್ದಾರಿ ಕೈಬಿಡುವಂತೆ ಶಿಕ್ಷಕರ ಸಂಘದಿಂದ ಆಗ್ರಹ

ಅಂಕೋಲಾ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಚುನಾವಣಾ ಬೂತ ಲೆವಲ್ ಆಫೀಸರ್ (ಮತಗಟ್ಟೆ ಅಧಿಕಾರಿ) ಆಗಿ ನೇಮಿಸಿದ್ದು, ಈ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬುಧ ವಾರ ಪ್ರಾಥಮಿಕ ಶಿಕ್ಷಕರ ಸಂಘದವರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಮಾತನಾಡಿ, ಶಿಕ್ಷಕರಿಗೆ ಮತಗಟ್ಟೆ ಅಧಿಕಾರಿ ಯಾಗಿ ಜವಾಬ್ದಾರಿ ನೀಡಿದ್ದು, ಇದರಿಂದ ಶೈಕ್ಷಣ ಕ ಚಟುವಟಿಕೆಗಳಿಗೆ ತೊಂದರೆಯಾಗುವ ಜತೆ ಶಿಕ್ಷಕರಿಗೆ ಮಾನಸಿಕ ಒತ್ತಡದ ಕೆಲಸದ ಹೊರೆ ನಿಭಾಯಿಸುವುದು ಕಷ್ಟವಾಗುತ್ತದೆ. ಶಾಲೆಯಲ್ಲಿ ಆಯಾ ತರಗತಿಗ ಳಲ್ಲಿ ನಿಗದಿಗೊಳಿಸಿರುವ ಪಠ್ಯವನ್ನು ಪೂರ್ಣಗೊಳಿಸಲು ಶಾಲಾ ಕೆಲಸದ ದಿನಗಳನ್ನು ಕನಿಷ್ಟ 244 ದಿನ ಗಳೆಂದು ನಿಗದಿಪಡಿಸಲಾಗಿದೆ. ಜನಗಣತಿ, ಚುನಾವಣಾ ಕಾರ್ಯ, ಮಕ್ಕಳ ಗಣತಿ ಕಾರ್ಯಗಳಿಗೆ ನಿಯೋಜಿಸುವುದರಿಂದ ವಿದ್ಯಾರ್ಥಿಗಳ ಬೋಧನಾ ಕಲಿಕಾ ಪ್ರಕ್ರಿಯೆಗೆ ಕೇವಲ 180 ದಿನಳಗಳು ಮಾತ್ರ ಸಿಗುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟ ಉಂಟಾಗಿ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಾಗಿದೆ ಎಂದರು.

ತಹಸೀಲ್ದಾರ ಪರವಾಗಿ ಶಿರಸ್ತೇದಾರ ಗಿರೀಶ ಜಾಂಬಳೇಕರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ, ವಿವಿಧ ಪದಾಧಿಕಾರಿಗಳಾದ ಭಾರತಿ ಬಿ.ನಾಯಕ, ಮಂಜುನಾಥ ವಿ.ನಾಯಕ, ವಿನಾಯಕ ಪಿ.ನಾಯ್ಕ, ತುಕಾರಾಮ ಬಂಟ, ಆನಂದು ನಾಯ್ಕ, ಅಶೋಕ ಬಲೇಗಾರ, ರಮಾ ಗೌಡ, ಜಯಲಕ್ಷ್ಮೀ ನಾಯಕ, ನಾರಾಯಣ ಆರ್.ನಾಯಕ, ಸುರೇಶ ಆಗೇರ, ಶ್ರೀನಿವಾಸ ಟಿ.ನಾಯಕ, ಕಸ್ತೂರಿ ಆಗೇರ, ಭಾಸ್ಕರ ಆಗೇರ, ಶಂಕರ ನಾಯ್ಕ, ವೇಲಾಯುಧ ನಾಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.