ಡೈಲಿ ವಾರ್ತೆ:02 ಆಗಸ್ಟ್ 2023
ವರದಿ: ವಿದ್ಯಾಧರ ಮೊರಬಾ
ಶಾಸಕ ಸತೀಶ ಸೈಲ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಾಲು: ಸಭೆಯಲ್ಲಿ ಹೆಸ್ಕಾಂ ಇಲಾಖೆಯ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ
ಅಂಕೋಲಾ : ಸಾರ್ವಜನಿಕರಿಗೆ ಅತೀ ಅವಶ್ಯಕವಾದ ಸೇವೆಗಳಲ್ಲಿ ಒಂದಾದ ವಿದ್ಯುತ್ ಇಲಾಖೆಯಲ್ಲಿ ಭಾರೀ ಪ್ರಮಾಣದ ಸಿಬ್ಬಂದಿ ಕೊರತೆಯಿದ್ದು, ಇಲಾಖೆಯ ಕಾರ್ಯಗಳನ್ನು ಮತ್ತು ಜನರಿಗೆ ಅಗತ್ಯ ಸೇವೆ ಗಳನ್ನು ನೀಡಲು ಕಷ್ಟವಾಗುತ್ತಿದೆ ಎಂದು ಹೆಸ್ಕಾಂ ಇಲಾಖೆಯ ಎಇಇ ಪ್ರವೀಣ ನಾಯ್ಕ ಅವರು ಶಾಸಕ ಸತೀಶ ಸೈಲ್ ಗಮನಕ್ಕೆ ತಂದರು.
ಇಲ್ಲಿಯ ತಾಪಂ.ಸಭಾಭವನದಲ್ಲಿ ಬುಧವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಅಹವಾಲು ಸಭೆಯಲ್ಲಿ ಮಾತನಾಡಿ, ನಮ್ಮಲ್ಲಿ ಒಟ್ಟು 272 ಮಂಜೂರಿ ಹುದ್ದೆಗಳಿದ್ದು, ಸದ್ಯ 55 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಕೊರತೆಯಿಂದ ಸಕಾಲದಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ತೊಂದರೆಯಾಗುತ್ತದೆ ಎಂದರು.
ಶಾಸಕ ಸತೀಶ ಕೆ.ಸೈಲ್ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿ, ತಾಲೂಕಿನಲ್ಲಿ ಎಲ್ಲೆಲ್ಲಿ ಸಮಸ್ಯೆ ಗಳಿವೆ ಎಂಬುದನ್ನು ಪಟ್ಟಿ ಮಾಡಿ ಆದ್ಯತೆ ಮೇರೆಗೆ ಅಗಷ್ಟ 15ರ ಒಳಗೆ ಆದಷ್ಟು ಎಲ್ಲವನ್ನೂ ಬಗೆಹರಿಸಿ ವರದಿ ನೀಡಿ ಎಂದು ಹೆಸ್ಕಾಂ ಇಲಾಖೆಗೆ ಸೂಚಿಸಿದರು. ಜಿ.ಪಂ.ಮಾಜಿ ಸದಸ್ಯ ಜಿ.ಎಂ.ಶೆಟ್ಟಿ ಮಾತನಾಡಿ, ಅಗಸೂರು ಮತ್ತು ರಾಮನಗುಳಿ ವ್ಯಾಪ್ತಿಗೆ ಹೆಸ್ಕಾಂನಿಂದ ಪ್ರತ್ಯೇಕ ಶಾಖಾ ಅಧಿಕಾರಿಗಳನ್ನು ನಿಯೋಜಿಸು ವದು ಉತ್ತಮ ಎಂದು ಸಲಹೆ ನೀಡಿದರು. ಗ್ರಾಪಂ.ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಪ್ರದೀಪ ನಾಯಕ ವಾಸರೆ ಮಾತನಾಡಿದರು.
ಹೆಸ್ಕಾಂ ಕಾರ್ಯನಿರ್ವಹಕ ಅಭಿಯಂತರ ರೋಶನಿ, ಸಹಾಯಕ ಇಂಜಿನೀಯರ ಗುರುರಾಜ್ ಪಟಗಾರ, ತಾಪಂ,ಪ್ರಭಾರ ಇಓ ಸುನೀಲ್ ಎಂ., ತಾಪಂ. ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ವಿವೇಕ ಭಟ್, ಸಂತೋಷ ನಾಯ್ಕ, ಸುಮಿತ್ರಾ, ವಿಶ್ವನಾಥ, ಸತೀಶ ರಾಘವೇಂದ್ರ ನಾಯ್ಕ, ಆರ್‍ಎಫ್‍ಓ ಜಿ.ವಿ.ನಾಯಕ, ಪ್ರಮುಖರಾದ ಅಗಸೂರು ಗ್ರಾಪಂ.ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ಗೋಪು ಅಡ್ಲರೂ, ಶಾಂತಿ ಆಗೇರ, ಮಂಜುನಾಥ ವಿ.ನಾಯ್ಕ, ರಾಜೇಶ ಎಂ.ನಾಯ್ಕ, ಮಂಜುನಾಥ ಡಿ.ನಾಯ್ಕ, ಜಗದೀಶ ಖಾರ್ವಿ ಬೆಳಂಬಾರ, ಪಾಂಡುರಂಗ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.