ಡೈಲಿ ವಾರ್ತೆ:03 ಆಗಸ್ಟ್ 2023
ಗ್ರಾ.ಪಂ ಚುನಾವಣೆ ಹಿನ್ನಲೆ: ‘ನಾವು ಪೊಲೀಸರು’ ಎಂದು ಗ್ರಾಮ ಪಂಚಾಯಿತಿ ಸದಸ್ಯೆಯ ಕಿಡ್ನಾಪ್ಗೆ ಯತ್ನ!
ಕಲಬುರಗಿ: ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಯತ್ನ ನಡೆದಿದೆ. ಇದಕ್ಕೆಲ್ಲಾ ಕಾರಣ ಗ್ರಾಮ ಪಂಚಾಯಿತಿ ಚುನಾವಣೆ! ನಾಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಅಪರಹಣಕ್ಕೆ ಯತ್ನ ನಡೆದಿದೆ.
ನಾಳೆ ಸಾವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಗದ್ದುಗೆ ಹಿಡಿಯಲು ಹರಸಾಹಸ ನಡೆಯುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಭಾರೀ ಸ್ಪರ್ಧೆ ಉಂಟಾಗಿದೆ ಎನ್ನಲಾಗುತ್ತಿದೆ. ಸಾವಳಗಿ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರ ಅಪಹರಣಕ್ಕೆ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಮಲ್ಲು ಕಡಗಂಚಿ ಸೇರಿದಂತೆ ಇತರರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದದ್ದು ಹೇಗೆ?
ಜಮೀನಿನಲ್ಲಿ ಕೆಲಸ ಮಾಡ್ತಿರುವಾಗ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನು, ಕ್ರೂಸರ್‌ನಲ್ಲಿ ಬಂದ 5 ರಿಂದ 6 ಜನ ಅಪಹರಣಕಾರರು, ಪೊಲೀಸರ ಹೆಸರು ಹೇಳಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಅವರು ಮಾರಕಾಸ್ತ್ರಗಳನ್ನು ಹಾಗೂ ಬಡಿಗೆಗಳನ್ನೂ ಹಿಡಿದುಕೊಂಡು ಸದಸ್ಯೆ ನಾಗಮ್ಮರನ್ನು ಅಪರಹಣ ಮಾಡಲು ಮುಂದಾಗಿದ್ದರು.
ಈ ವೇಳೆ ಸ್ಥಳಕ್ಕೆ ನಾಗಮ್ಮ ಅವರ ಪುತ್ರ ಹಾಗೂ ಗ್ರಾಮಸ್ಥರು ಬಂದಿದ್ದಾರೆ. ಜನ ಸೇರುವುದನ್ನು ಕಂಡು ಅಪಹರಣಕಾರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಸದಸ್ಯೆ ನಾಗಮ್ಮ ಮತ್ತು ಪುತ್ರ ಮಲ್ಲಿಕಾರ್ಜುನಿಗೆ ಗಾಯಗಳಾಗಿವೆ. ಅಪಹರಣಕಾರರಲ್ಲಿ ನಾಲ್ವರು ತಪ್ಪಿಸಿಕೊಂಡಿದ್ದು, ಗ್ರಾಮಸ್ಥರ ಕೈಗೆ ಓರ್ವ ಸಿಕ್ಕಿಬಿದ್ದಿದ್ದಾನೆ. ಆತನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಈತ, ಸಿಕ್ಕಿ ಬೀಳುತ್ತಿದ್ದಂತೆಯೇ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದಾರೆ. ನಂತರ ಆತನನ್ನೂ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.