ಡೈಲಿ ವಾರ್ತೆ:03 ಆಗಸ್ಟ್ 2023

ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ತಲವಾರು, ಕತ್ತಿ ಹಿಡಿಯಲು ರೆಡಿಯಾಗಿ : ಶರಣ್‌ ಪಂಪ್‌ವೆಲ್‌ ಪ್ರಚೋದನಕಾರಿ ಭಾಷಣ!

ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಅನ್ಯಧರ್ಮೀಯ ಮೂವರು ವಿದ್ಯಾರ್ಥಿನಿಯರು ಮಾಡಿರುವ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಇಂದು ಕೃಷ್ಣನಗರಿಯಲ್ಲಿ ಬೃಹತ್‌ ಜಾಥಾ ಪ್ರತಿಭಟನೆ ನಡೆಯಿತು.

ಭಾರೀ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ರಾಜ್ಯ ಸರಕಾರ ತನಿಖೆ ನಡೆಸುವಲ್ಲಿ ವಿಫಲವಾಗಿದೆ ಎಂದು ಸರಕಾರದ ವಿರುದ್ಧ ಧಿಕ್ಕಾರವನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಭಾರತ್ ಮಾತಾಕಿ ಜೈ ಘೋಷಣೆ ಮುಗಿಲು ಮುಟ್ಟಿತ್ತು. ಎಲ್ಲೆಡೆ ಜೈಕಾರ ಘೋಷಣೆಗಳೇ ಕೇಳಿ ಬರುತ್ತಿತ್ತು. ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳ ಈ ಪ್ರತಿಭಟನೆಯನ್ನು ಆಯೋಜಿಸಿತ್ತು.
ಜೋಡುಕಟ್ಟೆಯಿಂದ ಕೃಷ್ಣ ಮಠದ ಪಾರ್ಕಿಂಗ್ ಎರಿಯಾದವರೆಗೆ ಬೃಹತ್ ರ್‍ಯಾಲಿ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಿದ್ದರು.

ವಿಶ್ವಹಿಂದು ಪರಿಷತ್‌ ಮುಖಂಡರಾದ ಶರಣ್ ಪಂಪ್‌ವೆಲ್ ಮಾತನಾಡಿ, ಸನಾತನ ಹಿಂದೂ ಸಂಸ್ಕೃತಿ ನಾಶ ಮಾಡಲು ರಾಕ್ಷಸಿಯರು ಬಂದಿದ್ದರು. ಜಿಹಾದಿ ರಾಕ್ಷಸಿಯರ ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಬಂದಿದ್ದಾರೆ. ಜಿಹಾದಿ ರಾಕ್ಷಸಿಯರಿಗೆ ಹಿಂದು ರಕ್ಷಕರಾಗಿ ನಾವು ಉತ್ತರ ಕೊಡಲು ಸದಾ ಸಿದ್ಧ ಎಂದರು.
ಇಂತಹ ದಾಳಿ ಇಂದಿಗೇ ಕೊನೆಯಾಗಬೇಕು. ಹಿಂದೂ ತಾಯಂದಿರು ಎಚ್ಚರ ಆಗಬೇಕು. ಸೌಟು ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ. ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿಯಾಗಿ. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ ಎಂದರು. ಹಿಂದು ಯುವತಿಯರು, ಶ್ರದ್ಧಾಕೇಂದ್ರಗಳನ್ನು ಮುಸಲ್ಮಾನರು ಟಾರ್ಗೆಟ್‌ ಮಾಡಿದ್ದಾರೆ ಎಂದರು.

ಈ ವೇಳೆ ಪ್ರಕರಣದ ನೈಜ ಸತ್ಯಾಂಶವನ್ನು ಹೊರತೆಗೆಯಲು ಸಂಪೂರ್ಣ ವಿಫಲರಾದ ಪೊಲೀಸ್ ಇಲಾಖೆ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಸುನೀಲ್ ಕೆ ಆರ್, ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್, ಶಕುಂತಲಾ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.