ಡೈಲಿ ವಾರ್ತೆ:03 ಆಗಸ್ಟ್ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಲಂಚ ಸ್ವೀಕರಿಸುತ್ತಿದ್ದ ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಲೀಲಾವತಿ, ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಲೋಕಾಯುಕ್ತ ಬಲೆಗೆ!
ಚಳ್ಳಕೆರೆ :ಚಳ್ಳಕೆರೆ ನಗರಸಭೆಯ ವ್ಯಾಪ್ತಿಯಲ್ಲಿರುವ ಒಬ್ಬರಿಗೆ ಮನೆ ಖಾತೆ ಬದಲಾವಣೆ ಮಾಡಿಕೊಡಲು 3 ಲಕ್ಷ ರೂ.ಗಳ ಲಂಚ ಸ್ವೀಕರಿಸುವಾಗ ಚಳ್ಳಕೆರೆ ನಗರಸಭೆ ಆಯುಕ್ತೆ ಟಿ.ಲೀಲಾವತಿ ಹಾಗೂ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ದೂರುದಾರ ವೈ.ನಾಗರಾಜಾಚಾರಿ ತಮ್ಮ ಪತ್ನಿ ಸುವರ್ಣಮ್ಮ ಹೆಸರಿನಲ್ಲಿ ಮನೆ ಖರೀದಿಸಿದ್ದು ಪತ್ನಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಕಳೆದ ಮೇ 26ರಂದು ಅರ್ಜಿ ಸಲ್ಲಿಸಿದ್ದು 2 ತಿಂಗಳ ನಂತರ ಖಾತೆ ಬದಲಾವಣೆ ಮಾಡಿಕೊಡಲು 5 ಲಕ್ಷಕ್ಕೆ ಬೇಡಿಕೆ ಇಟ್ಟು ಕೊನೆಗೆ 3 ಲಕ್ಷ ರೂ.ಗಳನ್ನು ದೂರುದಾರರಿಂದ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣ ಸಮೇತ ಇಬ್ಬರು ಆರೋಪಿಗಳನ್ನು ಗುರುವಾರ ಸಂಜೆ ಬಂಧಿಸಿದ್ದಾರೆ.
ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಆರೋಪಿ ನಂಬರ್-1 ಆಗಿದ್ದು 2ನೇ ಆರೋಪಿ ಬಿಲ್ ಕಲೆಕ್ಟರ್ ನಿಶಾನಿ ಕಾಂತರಾಜ್ ಆಗಿರುತ್ತಾರೆ. ಪೌರಾಯುಕ್ತೆಯ ಸೂಚನೆ ಮೇರೆಗೆ 2ನೇ ಆರೋಪಿ ಲಂಚದ 3 ಲಕ್ಷ ರೂ.ಗಳನ್ನು ಪಡೆದು 1ನೇ ಆರೋಪಿ ಲೀಲಾವತಿ ಬಳಕೆ ಮಾಡುವ ಕಾರಿನಲ್ಲಿ ಶೇಖರಣೆ ಮಾಡಿ ಇಟ್ಟಿರುತ್ತಾನೆ.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಎಲ್.ಪಿ. ಗೇಟ್ ಬಳಿ ದೂರುದಾರ ವೈ. ನಾಗರಾಜಾಚಾರಿ ಇವರಿಂದ 3 ಲಕ್ಷ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.
ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಲೋಕಾಯುಕ್ತ ಕಚೇರಿ ಡಿವೈಎಸ್ಪಿ ಎನ್. ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಪ್ರಕರಣ ದಾಖಲಿಸಲಾಗಿದೆ.
ದಾಳಿ ಸಂದರ್ಭದಲ್ಲಿ ಚಿತ್ರದುರ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ ವೈಎಸ್, ಶಿಲ್ಪಾ, ಆರ್. ವಸಂತಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜಿ.ಎಂ.ತಿಪ್ಪೇಸ್ವಾಮಿ, ಹೆಚ್. ಶ್ರೀನಿವಾಸ, ಎಸ್.ಆರ್.ಪುಷ್ಪ, ಎಲ್.ಜಿ.ಸತೀಶ, ಜಿ.ಎನ್. ಸಂತೋಷ್ ಕುಮಾರ್, ಎಂ.ವೀರೇಶ್, ರಾಜೇಶ್, ಮಂಜುನಾಥ, ಮಹಲಿಂಗಪ್ಪ, ಕೆ.ಟಿ. ಮಾರುತಿ, ಆರ್.ವೆಂಕಟೇಶ್ಕುಮಾರ್, ಟಿ.ವಿ.ಸಂತೋಷ್, ಡಿ.ಮಾರುತಿ, ಎನ್.ಎಲ್.ಶ್ರೀಪತಿ, ಶಿವಮೊಗ್ಗ ಲೋಕಾಯುಕ್ತ ಠಾಣೆಯ ಸಿಬ್ಬಂದಿಗಳಾದ ಆರ್. ಮಹಂತೇಶ, ಆರ್. ಸಾವಿತ್ರಮ್ಮ, ಪ್ರಶಾಂತ್ ಕುಮಾರ್, ತರುಣ್‌ಕುಮಾರ್, ಇವರುಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿರುತ್ತಾರೆ.