


ಡೈಲಿ ವಾರ್ತೆ:04 ಆಗಸ್ಟ್ 2023


ವರದಿ: ರವಿತೇಜ ಕಾರವಾರ
ಮೂರು ದಿನಗಳ ಗಂಡು ಶಿಶು ಬಿಟ್ಟು ಹೋದ ಪಾಲಕರು: ಆರೋಗ್ಯ ಕೇಂದ್ರದಲ್ಲಿ ರಕ್ಷಣೆ
ಮುಂಡಗೋಡ: ಮೂರು ದಿನಗಳ ನವಜಾತ ಶಿಶುವೊಂದನ್ನು ಪಟ್ಟಣದ ಜ್ಯೋತಿ ಆರೋಗ್ಯ ಕೇಂದ್ರದಲ್ಲಿರುವ ಮಮತೆ ತೊಟ್ಟಿಲಿನಲ್ಲಿ ಯಾರೋ ಇಟ್ಟು ಹೋದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದ್ದು ಆರೋಗ್ಯ ಕೇಂದ್ರದಲ್ಲಿ ಈ ಗಂಡು ಮಗುವಿನ ಪಾಲನೆ ಮಾಡಲಾಗುತ್ತಿದೆ.
ಇನ್ನು ಈ ಬಗ್ಗೆ ಶಿರಸಿಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಲಾಗಿದ್ದು ಅವರು ಅಲ್ಲಿನ ದತ್ತು ಸ್ವೀಕಾರ ಕೇಂದ್ರದವರಿಗೆ ಮಾಹಿತಿ ನೀಡಲಿದ್ದಾರೆ. ಬಳಿಕ ದತ್ತು ಸ್ವೀಕಾರ ಕೇಂದ್ರದವರು ಎರಡು ದಿನಗಳಲ್ಲಿ Áಗಮಿಸಿ ಮಗುವನ್ನು ತಮ್ಮ ವಶಕ್ಕೆ ಪಡೆಯುತ್ತಾರೆ. ಬಳಿಕ ಮಗುವನ್ನು ವೆಬ್‌ಸೈಟ್‌ನಲ್ಲಿ ಸರದಿ ಪ್ರಕಾರ ನೋಂದಣಿಯಾದ ದತ್ತು ಪಡೆಯುವವರಿಗೆ ನೀಡಲಾಗುತ್ತದೆ. ಇದಕ್ಕೂ ಮುನ್ನ ಮಗುವನ್ನು ಇಟ್ಟು ಹೋದವರು ಮತ್ತೆ ತಮಗೆ ಮಗು ಬೇಕು ಎಂದು ಬರುವ ಸಾಧ್ಯತೆ ಇರುವುದರಿಂದ ಕಾಲಾವಕಾಶ ನೀಡಿ ಕೆಲವು ನಿಯಮಗಳನ್ನು ಅನುಸರಿಸಿ ಮಗುವನ್ನು ದತ್ತು ನೀಡುವ ಪ್ರಕ್ರಿಯೆ ಮಾಡಲಾಗುತ್ತದೆ. ಸದ್ಯಕ್ಕೆ ಮಗು ಆರೋಗ್ಯವಾಗಿದ್ದು ಜ್ಯೋತಿ ಆರೋಗ್ಯ ಕೇಂದ್ರದಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಪ್ರಭಾರ ಸಿಡಿಪಿಒ ದೀಪಾ ಬಂಗೇರ ಮಾಹಿತಿ ನೀಡಿದರು.
ಈ ವೇಳೆ ಜ್ಯೋತಿ ಆರೋಗ್ಯ ಕೇಂದ್ರಕ್ಕೆ ಸಹಾಯಕ ಮಕ್ಕಳ ರಕ್ಷಣಾ ಅಧಿಕಾರಿ, ಅಂಗನವಾಡಿ ಮೇಲ್ವಿಚಾರಕಿ ರೂಪಾ ಅಂಗಡಿ, ಎಎಸ್‌ಐ ಗೀತಾ ಕಲಘಟಗಿ ಭೇಟಿ ನೀಡಿ ಮಾಹಿತಿ ಪಡೆದರು.