ಡೈಲಿ ವಾರ್ತೆ:08 ಆಗಸ್ಟ್ 2023

ಇಂದು ಸಂಜೆ ಅಥವಾ ತಡರಾತ್ರಿ ಸ್ಪಂದನಾ ಪಾರ್ಥೀವ ಶರೀರ ಬೆಂಗ್ಳೂರು ತಲುಪುವ ಸಾಧ್ಯತೆ: ನಾಳೆ ಅಂತ್ಯಕ್ರಿಯೆ

ಬೆಂಗಳೂರು: ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಇಂದು ಬೆಳಗ್ಗೆಯೂ ಬ್ಯಾಂಕಾಕ್ನಲ್ಲಿ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಲಿವೆ. ಈಗಾಗಲೇ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಬಾಕಿ ಉಳಿದಿರುವ ಪ್ರಕ್ರಿಯೆಗಳು ಇಂದು ಮಧ್ಯಾಹ್ನದ ಒಳಗೆ ಮುಗಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಧ್ಯಾಹ್ನ 2 ಗಂಟೆಯ ಒಳಗೆ ಎಲ್ಲ‌ ಪ್ರಕ್ರಿಯೆಗಳು ಮುಗಿದರೆ, ಬ್ಯಾಂಕಾಕ್ನಿಂದ ಸ್ಪಂದನಾ ಪಾರ್ಥೀವ ಶರೀರ ಸಂಜೆ 6 ಗಂಟೆಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ.

ಇಂಡಿಗೋ ಪ್ಯಾಸೆಂಜರ್ ವಿಮಾನದ ಮೂಲಕವೇ ಪಾರ್ಥಿವ ಶರೀರ ತರಬಹುದು ಎನ್ನಲಾಗಿದೆ. ಏಕೆಂದರೆ, ಇಂಡಿಗೋ ವಿಮಾನದಲ್ಲಿ ಪಾರ್ಥಿವ ಶರೀರ ತರಲು ಅವಕಾಶ ಇರುತ್ತದೆ. ಆದರೆ, ಮಧ್ಯಾಹ್ನ 2 ಗಂಟೆಯ ನಂತರವೂ ಪ್ರಕ್ರಿಯೆಗಳು ತಡವಾದ್ರೆ ಥೈ ಏರ್ಲೈನ್ಸ್ ಮೂಲಕ ಪ್ರಾರ್ಥೀವ ಶರೀರ ತರಬೇಕಾಗುತ್ತದೆ. ಬ್ಯಾಂಕಾಕ್ ಟು ಬೆಂಗಳೂರಿಗೆ ಇಂದು ರಾತ್ರಿ 9.30ಕ್ಕೆ ಥೈ ಏರ್ಲೈನ್ಸ್ ವಿಮಾನ ಇದೆ. ಒಂದು ವೇಳೆ ಕಾನೂನು ಪ್ರಕ್ರಿಯೆ‌ ತಡವಾಗಿ ರಾತ್ರಿ 9.30ರ ವಿಮಾನದಲ್ಲಿ ಹೊರಟರೆ ಬೆಂಗಳೂರಿಗೆ ಬರಲು ಮಧ್ಯರಾತ್ರಿ ಆಗಲಿದೆ.

ಅಂತಿಮ ದರ್ಶನ ಎಲ್ಲಿ?
ಸದ್ಯಕ್ಕೆ ಪಾರ್ಥೀವ ಶರೀರದ ಅಂತಿಮ ದರ್ಶನ ಎಲ್ಲಿ ಆಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಮಲ್ಲೇಶ್ವರಂ ಗ್ರೌಂಡ್ ಅಥವಾ ಬಿಜೆಪಿ ಕಚೇರಿ ಎದುರಿನ ಮೈದಾನ ಎರಡರಲ್ಲಿ‌ ಒಂದು ಕಡೆ ಅಂತಿಮ ದರ್ಶನಕ್ಕೆ ಇಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಅಂತ್ಯಕ್ರಿಯೆಯು ಈಡಿಗ ಸಮುದಾಯದ ಪ್ರಕಾರ ಆಗಲಿದೆ. ಅಂತ್ಯಕ್ರಿಯೆ ಜಾಗ ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಮೂಲಗಳ ಪ್ರಕಾರ ನಾಳೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಕಾರ್ಯ ನಡೆಸುವ ಸಾಧ್ಯತೆ ಇದೆ.