ಡೈಲಿ ವಾರ್ತೆ:08 ಆಗಸ್ಟ್ 2023

ಹರ ಹರ ಶಂಭು ಹಾಡನ್ನು ಹಾಡಿ ಜನಮನ ಗೆದ್ದಿರುವ ಗಾಯಕಿ ಫರ್ಮಾನಿ ನಾಜ್ ಸಹೋದರನ ಬರ್ಬರ ಹತ್ಯೆ!

ಲಖನೌ: ಹರ ಹರ ಶಂಭು ಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಉತ್ತರ ಪ್ರದೇಶದ ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಅವರ ಸೋದರಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಖುರ್ಷಿದ್ (18) ಕೊಲೆಯಾದ ನಾಜ್ ಸೋದರ. ಮುಜಾಫರ್ನಗರದ ಮೊಹಮ್ಮದ್ಪುರ ಮಾಫಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುರ್ಷಿದ್, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ವರದಿ ಪ್ರಕಾರ, ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ಅವರನ್ನು ಸುತ್ತುವರಿದು ಚಾಕು ತೋರಿಸಿದರು. ಖುರ್ಷಿದ್ ವಿರುದ್ಧ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಆತನಿಗೆ ಚಾಕುವಿನಿಂದ ಇರಿದ ಬಳಿಕ ಆ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಖುರ್ಷಿದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ.
ಇನ್ನು ಫರ್ಮಾನಿ ನಾಜ್ ವಿಚಾರಕ್ಕೆ ಬರುವುದಾದರೆ, 2022ರಲ್ಲಿ ಅವರು ಹಾಡಿದ ಹರ ಹರ ಶಂಭು ಹಾಡಿನಿಂದ ರಾತ್ರೋರಾತ್ರಿ ನಾಜ್ ಪ್ರಖ್ಯಾತಿ ಗಳಿಸಿದರು. ನಾಜ್ ಹಾಡಿದ ಹಾಡು ಭಕ್ತರ ಬಳಗದ ಅಚ್ಚುಮೆಚ್ಚಿನ ಹಾಡಾಯಿತು. ಎಲ್ಲಿ ನೋಡಿದರೂ ನಾಜ್ ಅವರ ಧ್ವನಿಯೇ ಕೇಳುವಷ್ಟು ಈ ಹಾಡು ಭಾರೀ ವೀಕ್ಷಣೆಗಳನ್ನು ಕಂಡು ಸಿಕ್ಕಾಪಟ್ಟೆ ವೈರಲ್ ಆಯಿತು.

ಆದಾಗ್ಯೂ, ನಾಜ್ ಅವರು ಹಾಡಿದ ಈ ಹಾಡು ಕಾಪಿರೈಟ್ ವಿವಾದಕ್ಕೆ ಸಿಲುಕಿತು. ಇನ್ನೊಬ್ಬ ಗಾಯಕ ಜೀತು ಶರ್ಮ ಈ ಹಾಡು ತನ್ನದು ಎಂದು ಹೇಳಿಕೊಂಡರು ಮತ್ತು ನಾಜ್ ಹಾಡನ್ನು ಕದ್ದಿದ್ದಾರೆ ಎಂದು ಆರೋಪಿಸಿದ ಬಳಿಕ ನಾಜ್ ಅವರು ತಮ್ಮ ಯೂಟ್ಯೂಬ್ನಿಂದ ಹಾಡನ್ನು ಡಿಲೀಟ್ ಮಾಡಿದರು.

ಇದಿಷ್ಟೇ ಅಲ್ಲದೆ, ದಿಯೋಬಂದ್ನ ಧರ್ಮಗುರು ಅವರು ನಾಜ್ ವಿರುದ್ಧ ಕಿಡಿಕಾರಿದರು. ಅದಕ್ಕೆ ಕಾರಣ ನಾಜ್ ಅವರು ತಮ್ಮ ಹಾಡುಗಳಲ್ಲಿ ಹಿಂದು ದೇವರುಗಳನ್ನು ಸ್ತುತಿಸುವುದು ಧರ್ಮಗುರುವಿಗೆ ಇಷ್ಟವಾಗಲಿಲ್ಲ. ಮುಸ್ಲಿಂ ಆಗಿದ್ದುಕೊಂಡು ಹಿಂದು ಹಾಡುಗಳನ್ನು ಹಾಡುವುದನ್ನು ಧರ್ಮಗುರು ವಿರೋಧಿಸಿ, ಎಲ್ಲ ಸಾಮಾಜಿಕ ಮಾಧ್ಯಮ ಪುಟದಿಂದ ಹಾಡನ್ನು ತೆಗೆದುಹಾಕಲು ಒತ್ತಾಯ ಮಾಡಿದಾಗ ನಾಜ್ ಅವರನ್ನು ವಿವಾದ ಮತ್ತೆ ಆವರಿಸಿತು.
ಪೊಲೀಸ್ ವರದಿಗಳ ಪ್ರಕಾರ, ನಾಜ್ ಅವರ ಕುಟುಂಬದ ಸದಸ್ಯರು ಕಬ್ಬಿಣ ಕಳ್ಳತನದ ಸಿಂಡಿಕೇಟ್‌ನ ಭಾಗವಾಗಿದ್ದಾರೆ ಮತ್ತು ಹವ್ಯಾಸಿ ಅಪರಾಧಿಗಳು ಎನ್ನಲಾಗಿದೆ. ಪ್ರಸ್ತುತ ಖುರ್ಷಿದ್ ಮೇಲಿನ ದಾಳಿಯನ್ನು ಕುಟುಂಬದ ಹಿಂದಿನ ಕೃತ್ಯಗಳಿಗೆ ಪ್ರತೀಕಾರವಾಗಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.