ಡೈಲಿ ವಾರ್ತೆ:10 ಆಗಸ್ಟ್ 2023
ಬಾವಿಗೆ ಬಿದ್ದ ಕಾಡೆಮ್ಮೆ ಮರಿ: ಅರಣ್ಯ ಇಲಾಖೆಯಿಂದ ರಕ್ಷಣೆ
ಶಿವಮೊಗ್ಗ: ಬಾವಿಗೆ ಬಿದ್ದ ಕಾಡೆಮ್ಮೆ ಮರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಹಾಯದಿಂದ ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಲಿ-ಲಿಂಗದಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಆ. 10 ರಂದು ಗುರುವಾರ ಬೆಳಗ್ಗೆ ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಕಾಡೆಮ್ಮೆ ಮರಿ ತೆರೆದ ಬಾವಿಯೊಳಗೆ ಬಿದ್ದಿದೆ. ಈ ಸಂಗತಿ ತಿಳಿದ ಗ್ರಾಮಸ್ಥರು, ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶೀಘ್ರವೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಮತ್ತು ಪಶು ವೈದ್ಯರ ತಂಡದ ಸಹಾಯದಿಂದ ಕ್ರೇನ್ ಬಳಸಿ ಮರಿಯನ್ನು ರಕ್ಷಿಸಿದ್ದಾರೆ.
20 ಅಡಿ ಆಳದ ಬಾವಿಗೆ ಬಿದ್ದ ಕಾಡೆಮ್ಮೆ ಮರಿಯನ್ನು ಜೆಸಿಬಿ ಕ್ರೇನ್ ಸಹಾಯದಿಂದ ಯಶಸ್ವಿಯಾಗಿ ಮೇಲೆತ್ತಲಾಗಿದೆ. ರಕ್ಷಣಾ ಕಾರ್ಯಾಚರಣೆಯ ನಂತರ, ಮರಿ ಸುಧಾರಿಸಿಕೊಂಡು ಬಳಿಕ ಮಂದಗತಿಯಲ್ಲಿ ಕಾಡಿನತ್ತ ಮರಳಿದೆ ಎಂದು ತಿಳಿದುಬಂದಿದೆ.