ಡೈಲಿ ವಾರ್ತೆ:10 ಆಗಸ್ಟ್ 2023

ಕಾರವಾರ: ನೌಕಾನೆಲೆಯಲ್ಲಿ ಬೋಟ್ ಇಂಜಿನ್‍ಗೆ ಬೆಂಕಿ – ತಪ್ಪಿದ ಅನಾಹುತ

ಕಾರವಾರ: ಬೋಟ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆದಿದೆ. ಕಾರವಾರದ ನೌಕಾನೆಲೆಯಲ್ಲಿ ಹಡಗುಗಳನ್ನು ಡಾಕ್ ಯಾರ್ಡ್‍ಗೆ ಎಳೆದು ತರುವ ತೇಜ್ ಹೆಸರಿನ ಟಗ್ ಬೋಟ್‍ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸಮುದ್ರದಿಂದ ಯುದ್ಧದ ಹಡಗನ್ನು ರಿಪೇರಿಗಾಗಿ ಎಳೆದು ತರಲು ತೆರಳಿದ್ದಾಗ ಬೋಟ್‌ ಇಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದ ಇಂಜಿನ್‍ಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಬೋಟ್‍ನ ಒಳಭಾಗದ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದಾಗಿ ನೌಕಾ ನೆಲೆಯ ಡಾಕ್ ಯಾರ್ಡ್‍ನಲ್ಲಿ ಬಾರೀ ಹೊಗೆ ಆವರಿಸಿಕೊಂಡು ಕೆಲ ಕಾಲ ಜನರಲ್ಲಿ ಆತಂಕ ಮನೆ ಮಾಡಿತ್ತು.

ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ನೌಕಾ ದಳದ (Indian Navy) ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟ್‍ನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌
ಘಟನೆ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.