ಡೈಲಿ ವಾರ್ತೆ:10 ಆಗಸ್ಟ್ 2023

ಬೀದಿನಾಟಕ ಕಲಾವಿದ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಬಂಧನ!

ಮಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ರಾಯಚೂರು ಮೂಲದ ಬೀದಿನಾಟಕ ಕಲಾವಿದ ಯಮನೂರ(22) ಎಂಬಾತನನ್ನು ಬಂಧಿಸಿದ್ದು, ಆರೋಪಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಹಿನ್ನಲೆ:
ರಾಯಚೂರು ಮೂಲದ ಆರೋಪಿ ಯಮನೂರ ಇನ್ಸ್ಟಾಗ್ರಾಂನಲ್ಲಿ ಸಂತ್ರಸ್ತ ಯುವತಿಗೆ ತಾನು ವಾಮಂಜೂರು ಪೊಲೀಸ್ ಠಾಣೆಯ ಎಸ್ಐ ಎಂದು ಪರಿಚಯಿಸಿಕೊಂಡಿದ್ದಾನೆ. ಇದಾದ ಕೆಲ ದಿನಗಳ ಬಳಿಕ 2023ರ ಮೇ ತಿಂಗಳಲ್ಲಿ ಆರೋಪಿಯೂ ಯುವತಿಯನ್ನು ಮಂಗಳೂರಿನ ಪ್ರಸಿದ್ಧ ದೇವಸ್ಥಾನ ಹಾಗೂ ಬೀಚ್ ಒಂದರಲ್ಲಿ ಭೇಟಿಯಾಗಿ ಆಕೆಯ ಜೊತೆ ಫೋಟೋಗಳನ್ನು ತೆಗೆಸಿಕೊಂಡಿದ್ದ.
ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದ್ದು, ಇದನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಅದರ ಫೋಟೋ ಹಾಗೂ ವಿಡಿಯೋಗಳನ್ನು ಸಂತ್ರಸ್ತೆ ಮನೆಯವರಿಗೆ ಕಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಹಾಗೂ ವಿಡಿಯೋವನ್ನೂ ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ಸಂತ್ರಸ್ತ ಯುವತಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ 14ದಿನಗಳ ನ್ಯಾಯಾಂಗ ಬಂಧನವನ್ನೂ ವಿಧಿಸಿ ಆದೇಶ ಹೊರಡಿಸಿದೆ.

ಮೋಸದ ಜಾಲಕ್ಕೆ ಯಾರು ಬಲಿಯಾಗಬೇಡಿ
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅರೋಪಿಯು ಬೀದಿ ನಾಟಕ ಕಲಾವಿದನಾಗಿದ್ದು, ಪೊಲೀಸ್ ಸಮವಸ್ತ್ರವನ್ನು ಹೊಂದಿದ್ದ. ಫೋಟೋಶೂಟ್ ಮಾಡಿಸಿ ಅದನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನೂ ನೋಡಿದ ಸಂತ್ರಸ್ತೆ ಆತನಿಗೆ ಮಾರು ಹೋಗಿದ್ದಾಳೆ. ಆರೋಪಿಯೂ ಕೃತ್ಯಕ್ಕೆ ಇದೇ ಸಮವಸ್ತ್ರವನ್ನೇ ಬಳಸಿಕೊಂಡಿದ್ದ.
ಕೆಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರು, ಹೆಣ್ಮಕ್ಕಳನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ, ಅತ್ಯಾಚಾರ, ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು ಮತ್ತು ಮೋಸದ ಜಾಲಕ್ಕೆ ಯಾರು ಬಲಿಯಾಗಬಾರದೆಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಕರೆ ನೀಡಿದ್ದಾರೆ.