ಡೈಲಿ ವಾರ್ತೆ:11 ಆಗಸ್ಟ್ 2023

ಕಾರವಾರ: ರಾಜ, ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

ಕಾರವಾರ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಹೊಸಕೊಪ್ಪ, ‘ಹಿಂದಿನ ಬಿಜೆಪಿ ಸರ್ಕಾರ ರೈತರ ಮಕ್ಕಳಿಗೆ ಅನುಕೂಲವಾಗುವ ವಿದ್ಯಾಸಿರಿ, ಭೂಸಿರಿ, ಶ್ರಮಶಕ್ತಿ ಸೇರಿದಂತೆ ಹಲವು ರೈತಪರ ಯೋಜನೆ ಜಾರಿಗೊಳಿಸಿತ್ತು. ತಾಲ್ಲೂಕಿಗೆ ಒಂದು ಗೋಶಾಲೆ ಸ್ಥಾಪಿಸಲು ಅನುದಾನ ಮೀಸಲಿಟ್ಟಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗಳನ್ನೆಲ್ಲ ರದ್ದುಪಡಿಸಿದೆ’ ಎಂದು ಆರೋಪಿಸಿದರು.

‘ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳೇಕರ್, ‘ಮತ ಬ್ಯಾಂಕ್‌
ಓಲೈಕೆಗೆ ಮಾತ್ರ ಆದ್ಯತೆ ನೀಡುವ ಕಾಂಗ್ರೆಸ್‌ ರೈತರ ಕಾಳಜಿಯನ್ನು
ಸಂಪೂರ್ಣ ಮರೆತಿದೆ’ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ‘ಗ್ಯಾರಂಟಿ ಯೋಜನೆಯ ನೆಪದಲ್ಲಿ ರೈತರನ್ನು ಆರ್ಥಿಕ ಸ್ಥಿತಿವಂತರಾಗಿಸಲು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಯೋಜನೆ ಸ್ಥಗಿತಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಎಪಿಎಂಸಿ ಕಾಯ್ದೆ ರದ್ದುಪಡಿಸುವ ಮೂಲಕ ತಾನು ದಲ್ಲಾಳಿ ಪರ ಎಂಬುದನ್ನು ಕಾಂಗ್ರೆಸ್‌ ದೃಢಪಡಿಸಿದೆ. ಇದು ಬಡ ವಿರೋಧಿ ಸರ್ಕಾರ. ಈ ಸರ್ಕಾರದ ವಿರುದ್ಧ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ಮುಖಂಡರಾದ ರೂಪಾಲಿ ನಾಯ್ಕ, ಸುನೀಲ ಹೆಗಡೆ, ಗೋವಿಂದ ನಾಯ್ಕ, ಗುರುಪ್ರಸಾದ ಹೆಗಡೆ, ರಾಜೇಂದ್ರ ನಾಯ್ಕ, ನಾಗರಾಜ ನಾಯಕ, ಇತರರು ಇದ್ದರು.