ಡೈಲಿ ವಾರ್ತೆ:11 ಆಗಸ್ಟ್ 2023
ಬಂಟ್ವಾಳ : ಪರಿಶಿಷ್ಟ ಜಾತಿ ಮತ್ತು ಪಂಗಡದವರ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆ
ಬಂಟ್ವಾಳ : ಪರಿಶಿಷ್ಟ ಜಾತಿ ಮತ್ತು ಪಂಗಡದವರ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆ ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಡಿ.ಸಿ.ಮನ್ನಾ ಜಾಗಕ್ಕೆ ಒಟ್ಟು 559 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಯಲ್ಲಿ 49 ಅರ್ಜಿಗಳು, ಕಂದಾಯ ನಿರೀಕ್ಷಕರ ಬಳಿ 149 ಅರ್ಜಿಗಳು ಬಾಕಿಯಾಗಿವೆ, ಉಳಿದಂತೆ ಎಲ್ಲವನ್ನು ವಿಲೇವಾರಿ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 39.22 ಎಕರೆ ಡಿ.ಸಿ.ಮನ್ನಾ ಜಾಗ ಕಾಯ್ದಿರಿಸಲಾಗಿದೆ ಎಂದು ತಾಲೂಕು ತಹಶಿಲ್ದಾರ್ ಬಿ.ಎಸ್.ಕೂಡಲಗಿ ಮಾಹಿತಿ ನೀಡಿದರು.
ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ಇರುವ ಅಂಬೇಡ್ಕರ್ ಭವನದ ಬಗ್ಗೆ , ಇಲ್ಲಿನ ಕಾಲೋನಿಯ ಹೈಮಾಸ್ಕ್ ದೀಪಗಳು ಉರಿಯುತ್ತಿಲ್ಲ, ಬಂಟ್ವಾಳ ತಾಲೂಕು ಆಸ್ಪತ್ರೆಯ ಅವರಣದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಬೇಕು, ಕಂದಾಯ ಇಲಾಖೆಯ ಲಿಪ್ಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜೊತೆಗೆ ತಾಂತ್ರಿಕ ದೋಷದಿಂದ ಅರ್ಧದಲ್ಲಿ ಕೆಟ್ಟುನಿಂತರೆ ದೂರು ನೀಡಲು ಅದರಲ್ಲಿ ಯಾವುದೇ ಪೋನ್ ನಂಬರ್ ಇಲ್ಲ, ಮಾಟ ಮಾಡುವ ಟೀಮ್ ನ್ನು ಬಂಧಿಸಬೇಕು, ದಲಿತ ಹುಡುಗಿಯರ ಮೊಬೈಲ್ ಸಂಖ್ಯೆ ಪಡೆದು ಬ್ಲಾಕ್ ಮೇಲ್ ಮಾಡುವ ಟೀಮನ್ನು ಕಂಡು ಹಿಡಿದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಬುಡೋಳಿ ಗ್ರಾಮದ ದಂಡೆಗೋಳಿ ಎಂಬಲ್ಲಿ ಮಾಟ ಮಂತ್ರ ಮಾಡಿ ಜನರಿಗೆ ತೊಂದರೆ ನೀಡುತ್ತಿರುವ ಮಂತ್ರವಾದಿಗೆ ಕಡಿವಾಣ ಹಾಕಬೇಕು, ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಗಳ ಆಡಳಿತ ಕಮಿಟಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರನ್ನು ನೇಮಕ ಮಾಡಬೇಕು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನ ಬೋರ್ಡ್ ಕಮಿಟಿಯಲ್ಲಿ ಪ.ಜಾತಿ, ಪ. ಪಂಗಡದವರು ಸೇರಲು ಅವಕಾಶ ಕಲ್ಪಿಸಬೇಕು, ಗಂಗಾಕಲ್ಯಾಣ ಯೋಜನೆಯಡಿ ಕೊರೆಯಲಾಗುವ ಕೊಳವೆ ಬಾವಿಯಲ್ಲಿ ನಡೆಯುತ್ತಿರುವ ಅವ್ಯಹಾರ, ಸಜೀಪ ಮುನ್ನೂರು ಗ್ರಾಮದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಬಂಟ್ವಾಳದಲ್ಲಿ ಚೆನ್ನ ದಾಸ ಜಾತಿಗೆ ಜಾತಿ ಪ್ರಮಾಣ ಪತ್ರ ನೀಡದೆ ಅಲೆದಾಡಿಸುತ್ತಿರುವುದು, ಅರಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮೊದಲಾದ ಸಮಸ್ಯೆ, ಅವ್ಯವಸ್ಥೆ, ಬೇಡಿಕೆಗಳನ್ನು ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್, ಸೇಸಪ್ಪ ಬೆದ್ರಕಾಡು, ಗಂಗಾದರ್, ಹೊನ್ನಪ್ಪ ಕುಂದರ್ , ಸತೀಶ್ ಅರಳ, ರಾಜೇಂದ್ರ ದಾಸ್ ಅವರು ಸಭೆಯ ಮುಂದಿಟ್ಟರು.
ತಾ.ಪಂ.ಸಹಾಯಕ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನೀತಾ ಉಪಸ್ಥಿತರಿದ್ದರು.