ಡೈಲಿ ವಾರ್ತೆ:12 ಆಗಸ್ಟ್ 2023
ಕೋಟ್ಯಂತರ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ)ಕಳ್ಳ ಸಾಗಾಟ: ಇಬ್ಬರ ಬಂಧನ
ಚಾಮರಾಜನಗರ: ಸುಮಾರು 3 ಕೆಜಿಯಷ್ಟು ತಿಮಿಂಗಿಲ ವಾಂತಿ ವಶಪಡಿಸಿಕೊಂಡು ಇಬ್ಬರನ್ನ ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಆನಂದ ದೇವಾಡಿಗ ಹಾಗೂ ಅಪ್ಪಣ್ಣ ನಾಯಕ ಬಂಧಿತ ಆರೋಪಿಗಳು.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲ ವಾಂತಿಯನ್ನು ತಮಿಳುನಾಡಿನ ಕೊಯಮತ್ತೂರಿಗೆ ಸಾಗಿಸುತ್ತಿದ್ದ ವೇಳೆ ಕೊಳ್ಳೇಗಾಲ ತಾಲೂಕಿನ ಟಗರಪುರ ರಸ್ತೆಯಲ್ಲಿ ಅರಣ್ಯ ಸಂಚಾರ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿಗಳಿಂದ 3 ಕೆಜಿ ತಿಮಿಂಗಿಲ ವಾಂತಿ, ಒಂದು ಅಲ್ಟೋ ಕಾರು, ಎರಡು ಮೊಬೈಲ್, 7 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ತಿಮಿಂಗಲ ವಾಂತಿಗೆ ಯಾಕಿಷ್ಟು ಬೇಡಿಕೆ?
ಅಂಬರ್ ಗ್ರೀಸ್ ಎಂಬ ವಸ್ತುವು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ.
ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ. ಏಕೆಂದರೆ, ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ ಹಾಗೂ ಅವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ ಕಳ್ಳಸಾಗಣೆದಾರರು ಅಂಬರ್ ಗ್ರೀಸ್ ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟ ನಿಷೇಧಿಸಿವೆ. ಹಾಗಾಗಿ ಇದು ಕಳ್ಳಸಾಗಣೆಯಾಗುತ್ತಿದೆ.