ಡೈಲಿ ವಾರ್ತೆ:13 ಆಗಸ್ಟ್ 2023
ನಟ ಉಪೇಂದ್ರ ವಿರುದ್ಧ ಜಾತಿ ನಿಂದನೆ ಆರೋಪ: ಎಫ್ಐಆರ್ ದಾಖಲು!
ಬೆಂಗಳೂರು: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಇಂದು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಎಫ್ಐಆರ್ಗೆ ಕಾರಣ, ನಟ ಉಪೇಂದ್ರ ಅವರು ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಮಾತಾಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಲ್ಲದೇ, ಅವಹೇಳನ ಶಬ್ಧ ಬಳಕೆ ಮಾಡಿದ್ದಾರೆ ಎಂದು ಉಪೇಂದ್ರ ವಿರುದ್ಧ ಮದೂಸೂಧನ್ ಕೆ.ಎಸ್ ಎಂಬುವವರು ದೂರು ಸಲ್ಲಿಸಿದ್ದಾರೆ. ನಟನ ಪೋಸ್ಟ್ ಮತ್ತು ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ತನ್ನ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಉಪೇಂದ್ರ ತಾವು ಹಾಕಿದ್ದ ವಿಡಿಯೋವನ್ನು ಫೇಸ್ ಬುಕ್ ಮತ್ತು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಬಳಿಕ ಕ್ಷಮೆ ಕೂಡ ಕೇಳಿದ್ದಾರೆ.