



ಡೈಲಿ ವಾರ್ತೆ:19 ಆಗಸ್ಟ್ 2023


ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಲೈನ್‍ಮೆನ್ ಮೇಲೆ ಯುವಕರಿಂದ ಹಲ್ಲೆ
ಹಾಸನ:ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಚೆಸ್ಕಾಂ ನೌಕರರ ಮೇಲೆ ಪುಂಡ ಯುವಕರ ತಂಡ ಹಲ್ಲೆ ನಡೆಸಿರುವ ಘಟನೆ ಹೊಳೆನರಸೀಪುರದ ಕಡವಿನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರದೀಪ್ ಹಾಗೂ ಕೃಷ್ಣಮೂರ್ತಿ ಹಲ್ಲೆಗೊಳಗಾದ ಚೆಸ್ಕಾಂ ಸಿಬ್ಬಂದಿಗಳು. ನೌಕರರಿಬ್ಬರು ಕಡವಿನಹೊಸಹಳ್ಳಿ ಗ್ರಾಮಕ್ಕೆ ವಿದ್ಯುತ್ ಲೈನ್ ದುರಸ್ತಿಗೆ ಬಂದು ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಯುವಕರ ತಂಡ ಸರಿಯಾಗಿ ಕರೆಂಟ್ ಕೊಡುತ್ತಿಲ್ಲ ಎಂದು ಲೈನ್‍ಮೆನ್‍ಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಗಳ ಮಾಡಿರುತ್ತಾರೆ. ನಂತರ ಈ ಜಗಳ ವಿಕೋಪಕ್ಕೆ ತಿರುಗಿದ್ದು, ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಗ್ರಾಮದ ಪುನೀತ್ ಹಾಗೂ ರಾಕೇಶ್ ಎಂದು ಗುರುತಿಸಲಾಗಿದೆ.
ಗಾಯಾಳು ಲೈನ್‍ಮೆನ್‍ಗಳನ್ನು ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.