ಡೈಲಿ ವಾರ್ತೆ:30 ಆಗಸ್ಟ್ 2023

ಸೌಜನ್ಯ ಪ್ರಕರಣ: ಸೆ. 11ರಿಂದ ಮಂಗಳೂರು ಡಿಸಿ ಕಚೇರಿ ಎದುರು ಧರಣಿ

ಮಂಗಳೂರು: ಸೌಜನ್ಯಾ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸೆ. 11ರಿಂದ 13ರ ವರೆಗೆ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಲಿದೆ ಎಂದು “ಸೌಜನ್ಯಾ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ’ಯ ಪ್ರಧಾನ ಸಂಚಾಲಕ ಬಾಲಕೃಷ್ಣ ಡಿ.ಬಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಧರಣಿ ಸತ್ಯಾಗ್ರಹ ಸೆ. 11ರಂದು ಬೆಳಗ್ಗೆ 10ಕ್ಕೆ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು ಅನಂತರ ಪ್ರಕರಣದ ಮರು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ನಿವೃತ್ತ ಸರಕಾರ ನ್ಯಾಯಾಧೀಶರ ಮೂಲಕ ಮರುತನಿಖೆ ಮಾಡಿಸಬೇಕು. ತನಿಖಾಧಿಕಾರಿಯನ್ನು ತನಿಖೆಗೆ ಒಳಪಡಿಸಬೇಕು. ಮರು ತನಿಖೆಗೆ ಆದೇಶ ಮಾಡುವವರೆಗೂ ಹೋರಾಟ ಮುಂದುವರಿಸ ಲಾಗುವುದು. ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಕಾನೂನಾತ್ಮಕ ಹೋರಾಟ ಕೂಡ ನಡೆಸಲಾಗುವುದು ಎಂದು ಹೇಳಿದರು.

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷ ಗುರುದೇವ್‌ ಯು.ಬಿ., ಯುವ ಘಟಕದ ಅಧ್ಯಕ್ಷ ಕಿರಣ್‌ ಬುಡ್ಲೆಗುತ್ತು, ವಿವಿಧ ಘಟಕಗಳ ಪ್ರವೀಣ್‌ ಮುಂಗ್ಲಿಮನೆ, ಚಂದ್ರಶೇಖರ್‌ ಕೊಲ್ಚಾರ್‌, ಸುರೇಶ್‌ ಬೈಲು, ಮೋನಪ್ಪ ಗೌಡ, ರಕ್ಷಿತ್‌ ಪುತ್ತಿಲ, ಮೋನಪ್ಪ ಗೌಡ ಮೊದಲಾದವರಿದ್ದರು.