ಡೈಲಿ ವಾರ್ತೆ: 14/09/2023
ಸ್ವಾಮೀಜಿ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತೆ: ಬಾಂಬ್ ಸಿಡಿಸಿದ ಚೈತ್ರಾ ಕುಂದಾಪುರ
ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂ. ಪಡೆದು, ವಂಚನೆ ಮಾಡಿರುವ ಆರೋಪದ ಮೇರೆಗೆ ಬಂಧಿತರಾಗಿರುವ ಚೈತ್ರಾ ಕುಂದಾಪುರಳನ್ನು ಇಂದು ಬೆಳಗ್ಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ಈ ವೇಳೆ ಆಕೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.
ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳುತ್ತಲೇ ಚೈತ್ರಾ ಸಿಸಿಬಿ ಕಚೇರಿ ಒಳಗಡೆ ಹೋದರು.
ಚೈತ್ರಾಳ ಈ ಹೇಳಿಕೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹಾಗದರೆ ಈ ಪ್ರಕರಣದಲ್ಲಿ ದೊಡ್ಡವರು ಸಹ ಶಾಮೀಲು ಆಗಿದ್ದಾರೆ. ಸ್ವಾಮೀಜಿ ಬಂಧನದ ಬಳಿಕ ಎಲ್ಲವೂ ಗೊತ್ತಾಗಲಿದೆಯಾ? ಎಂಬ ಪ್ರಶ್ನೆ ಮೂಡಿದೆ. ಅಂದಹಾಗೆ ಚೈತ್ರಾ ಕುಂದಾಪುರ ಅವರೊಂದಿಗೆ ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲು ಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀನಿ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಾತ್ರಿಯಿಡೀ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕಾಲ ಕಳೆದ ಚೈತ್ರಾ, ಮೊದಲ ದಿನದ ಸಿಸಿಬಿ ವಿಚಾರಣೆ ವೇಳೆ ನಾನು ತಪ್ಪು ಮಾಡಿಲ್ಲ, ನನ್ನದು ತಪ್ಪಿಲ್ಲ ಎಂದು ಹೇಳಿದ್ದಾಳೆ. ಇಂದು ಮತ್ತೆ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಬಂಧಿತರ ಎಲ್ಲ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಯಾರೆಲ್ಲ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳಲು ಮೊಬೈಲ್ಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಎಲ್ಲ ಚಾಟಿಂಗ್ ಮಾಹಿತಿ ಡಿಲೀಟ್ ಆಗಿರುವುದು ಪತ್ತೆಯಾಗಿದೆ. ಹೀಗಾಗಿ ಕೋರ್ಟ್ ಅನುಮತಿ ಪಡೆದು ಮೊಬೈಲ್ ರಿಟ್ರೀವ್ ಮಾಡಿಸಲು ಸಿಸಿಬಿ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಇಂದು ಎಲ್ಲ ಆರೋಪಿಗಳನ್ನು ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮಾಡಲಾಗುತ್ತದೆ. ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ.