ಡೈಲಿ ವಾರ್ತೆ: 17/09/2023

ಏಷ್ಯಾ ಕಪ್ ಫೈನಲ್: ಸಿರಾಜ್ ದಾಳಿಗೆ ಪತರುಗುಟ್ಟಿದ ಸಿಂಹಳೀಯರು – ಕೇವಲ 50 ರನ್ ಗೆ ಆಲೌಟ್!

ಕೊಲಂಬೊ: ಭಾರತದ ವೇಗಿಗಳ ಬಿಗು ದಾಳಿಗೆ ಪರದಾಡಿದ ಶ್ರೀಲಂಕಾ ತಂಡವು ಏಷ್ಯಾ ಕಪ್ 2023ರ ಫೈನಲ್ ಪಂದ್ಯದಲ್ಲಿ ಕೇವಲ 50 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಮೊಹಮದ್ ಸಿರಾಜ್ ಅವರ ಬೆಂಕಿ ಬೌಲಿಂಗ್ ಗೆ ಲಂಕನ್ ಬ್ಯಾಟರ್ ಗಳು ಪರದಾಡಿದರು.

ಮೊದಲ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿದ ಲಂಕಾ ಕೇವಲ 15.2 ಓವರ್ ನಲ್ಲಿ ಆಲೌಟಾಯಿತು.

ಲಂಕಾ ಪರ ಕೇವಲ ಇಬ್ಬರು ಮಾತ್ರ ಎರಡಂಕಿ ಮೊತ್ತ ದಾಟಿದರು. ಕುಸಲ ಮೆಂಡಿಸ್ 17 ರನ್ ಮತ್ತು ದುಶಾನ್ ಹೇಮಂತ 13 ರನ್ ಮಾಡಿದರು. ಲಂಕಾದ ಐದು ಬ್ಯಾಟರ್ ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಏಳು ಓವರ್ ಬೌಲಿಂಗ್ ಮಾಡಿದ ಸಿರಾಜ್ 21 ರನ್ ನೀಡಿ ಆರು ವಿಕೆಟ್ ಪಡೆದರು. 2.2 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಕಿತ್ತರು. ಒಂದು ವಿಕೆಟ್ ಬುಮ್ರಾ ಪಾಲಾಯಿತು. ಅದರಲ್ಲೂ ಮೊಹಮ್ಮದ್ ಸಿರಾಜ್ ಒಂದೇ ಓವರ್ ನಲ್ಲಿ ನಾಲ್ಕು ವಿಕೆಟ್ ಕಿತ್ತರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಸಾಧನೆಯನ್ನೂ ಮಾಡಿದರು.
ಏಕದಿನ ಕ್ರಿಕೆಟ್ ನಲ್ಲಿ ಇದು ಶ್ರೀಲಂಕಾದ ಎರಡನೇ ಅತಿ ಕಡಿಮೆ ರನ್ ಆಗಿದೆ. ಈ ಹಿಂದೆ ದ.ಆಫ್ರಿಕಾ ವಿರುದ್ಧ 43 ರನ್ ಗೆ ಆಲೌಟಾಗಿತ್ತು. ಏಕದಿನ ಫೈನಲ್ ಪಂದ್ಯವೊಂದರಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ.