ಡೈಲಿ ವಾರ್ತೆ:18 ಸೆಪ್ಟೆಂಬರ್ 2023
ಬಂಟ್ವಾಳ : ಹಗಲು ಮನೆ ಕಳವು ಮಾಡುತ್ತಿದ್ದ ಕಳ್ಳರ ಬಂಧನ, ಲಕ್ಷಾಂತರ ರೂ ಮೌಲ್ಯದ ಸೊತ್ತು ವಶಕ್ಕೆ
ಬಂಟ್ವಾಳ : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತು ಕಳ್ಳತನ ನಡೆಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ನಗರ ಪೊಲೀಸರು ಅವರಿಂದ ಒಟ್ಟು 15.56 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಮಂಗಳೂರು ತಾಲೂಕು ಬೆಂಗ್ರೆ ಕಸಬಾ ನಿವಾಸಿ ಪರಾಜ್ (27) ಹಾಗೂ ಮಂಗಳೂರು ತಾಲೂಕು ಚೊಕ್ಕಬೆಟ್ಟು – ಕೃಷ್ಣಾಪುರ ನಿವಾಸಿ ತೌಸಿಫ್ ಅಹಮ್ಮದ್ (34) , ಎಂಬವರುಗಳನ್ನು ದಸ್ತಗಿರಿ ಮಾಡಿದ್ದಾರೆ.
ಜನವರಿ 09 ರಂದು ಸಜಿಪ ಮುನ್ನೂರು ಗ್ರಾಮದ ದೇವಮಾತಾ ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಮೈಕೆಲ್ ಡಿಸೋಜಾ ಎಂಬವರ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು 115 ಗ್ರಾಂ ತೂಕದ ಸುಮಾರು 5.36 ಲಕ್ಷ ಮೌಲ್ಯದ ಚಿನ್ನಾಭರಣ, 3000 ರೂಂ ಮೌಲ್ಯದ ಬೆಳ್ಳಿ ಸಾಮಾಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಅ. ಕ್ರ.98/ 2023 ಕಲಂ : 454, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣದ ಆರೋಪಿಗಳಿಂದ ಒಟ್ಟು ರೂ. 12,23,000/- ಮೌಲ್ಯದ 223 ಗ್ರಾಂ ಚಿನ್ನಾಭರಣ ಮತ್ತು ರೂ. 3,000/- ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000/- ಮೌಲ್ಯದ ಮಹೀಂದ್ರ ಕ್ಸೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000/-ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಚಿನ್ನಾಭರಣಗಳ ಪೈಕಿ ಪಣಂಬೂರು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನಾಭರಣಗಳು ಸೇರಿರುತ್ತದೆ. ಆರೋಪಿಗಳ ಪೈಕಿ ಫರಾಜ್ ಎಂಬಾತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಸ್.ಪಿ. ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್.ಪಿ. ಧರ್ಮಪ್ಪ ಎನ್.ಎಂ, ಡಿ.ವೈ.ಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್.ಇ. ಅವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಎಸ್.ಐ. ರಾಮಕೃಷ್ಣ ಅಪರಾಧ ವಿಭಾಗದ ಎಸ್.ಐ ಕಲೈಮಾರ್, ಎ.ಎಸ್.ಐ ನಾರಾಯಣ, ಹೆಡ್ ಕಾನ್‌ಸ್ಟೇಬಲ್‌ಗಳಾದ ಇರ್ಷಾದ್ ಪಿ. ರಾಜೇಶ್, ಮನೋಹರ, ಕಾನ್‌ಸ್ಟೇಬಲ್‌ಗಳಾದ ಉಮೇಶ್ ಹಿರೇಮಠ, ರಂಗನಾಥ್, ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ, ಜಿಲ್ಲಾ ಗಣಕಯಂತ್ರ ಕೇಂದ್ರದ ದಿವಾಕರ ಮತ್ತು ಸಂಪತ್ ಅವರು ಆರೋಪಿ ಪತ್ತೆ ಬಗ್ಗೆ ಸಹಕರಿಸಿದ್ದಾರೆ.