ಡೈಲಿ ವಾರ್ತೆ: 23/Sep/2023

ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ: ಅಲ್ಪಸಂಖ್ಯಾತರ ಹಿತ ಕಾಯುವ ನಿಟ್ಟಿನಲ್ಲಿ ಶೀಘ್ರದಲ್ಲೇ ಪಕ್ಷದ ಮುಸ್ಲಿಂ ಮುಖಂಡರ ಸಭೆ – ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್

ಬಂಟ್ವಾಳ : ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ವಿರುದ್ಧ ಬರುತ್ತಿರುವ ಆರೋಪಗಳು ಹಾಗೂ ಅಲ್ಪಸಂಖ್ಯಾತರ ಹಿತ ಕಾಯುವ ನಿಟ್ಟಿನಲ್ಲಿ ಪಕ್ಷದ ಮುಸ್ಲಿಂ ಮುಖಂಡರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಎಲ್ಲಾ ರಾಜ್ಯ ಘಟಕದ ನಾಯಕರ ಸಂಪರ್ಕದಲ್ಲಿ ಇದ್ದು ಪಕ್ಷದ ಆಗು ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಗಿಂತಲೂ ಜೆಡಿಎಸ್ ಪಕ್ಷದ ಮೇಲೆ ಭರವಸೆ ಹೊಂದಿದ್ದರು. ಹಿಜಾಬ್ ಅಝಾನ್, ಗೋಲಿಬಾರ್, ಅಮಾಯಕರ ಬಂಧನ ಹಾಗೂ ಪಿ.ಎಫ್.ಐ ನಿಷೇಧ ಇನ್ನಿತರ ವಿಚಾರಗಳಲ್ಲಿ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಮಾತನಾಡಿದ್ದಲ್ಲದೇ ಕ.ಕ.ಜಿಲ್ಲೆಗೆ ಸ್ವತಃ ಭೇಟಿ ನೀಡಿ ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದರು.

ರಾಜಕೀಯ ಅನಿವಾರ್ಯ ಕಾರಣಗಳಿಂದಾಗಿ ನಮ್ಮ ನಾಯಕರು ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾಗಿರ ಬಹುದು ಆದರೂ ಅಲ್ಪಸಂಖ್ಯಾತರ ಹಿತ ಕಾಯೋ ಉದ್ದೇಶದಿಂದ ರಾಜ್ಯದ ಜೆಡಿಎಸ್ ನ ಮುಸ್ಲಿಂ ಮುಖಂಡರುಗಳ ಸಲಹೆ ಸೂಚನೆಗಳನ್ನು ಪಡೆದು ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾರೂನ್ ರಶೀದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ