ಡೈಲಿ ವಾರ್ತೆ:29 ಸೆಪ್ಟೆಂಬರ್ 2023

ರೈತರ ಹೊಟ್ಟೆ ಉರಿಯುತ್ತಿದೆ ಅಂತ ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ

ಮಂಡ್ಯ: ಅಕ್ಟೋಬರ್ 15ರ ವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದರಿಂದ ಮಂಡ್ಯದ ರೈತರ ಆಕ್ರೋಶ ಕಟ್ಟೆಯೊಡೆದಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಖಂಡಿಸಿ ರಸ್ತೆಯಲ್ಲೇ ವಿನೂತನ ಪ್ರತಿಭಟನೆ ನಡೆಸಿದ ರೈತರು ಹಸಿರು ಮೆಣಸಿನಕಾಯಿ ತಿಂದು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿದ ರೈತ ಮುಖಂಡರು, ಇಂದು ಮಂಡ್ಯದ ರೈತರಿಗೆ ಸಿಹಿ ಸುದ್ದಿ ಸಿಗುತ್ತೆ ಅಂತಾ ಭಾವಿಸಿದ್ದೆವು. ಆದ್ರೆ ಕಹಿ ಮತ್ತು ಖಾರವಾದ ಸುದ್ದಿ ಬಂದಿದೆ. ಈಗ ನಿಜವಾಗಿಯೂ ಹೊಟ್ಟೆ ಉರಿಯುತ್ತಿದೆ. ಇನ್ನೂ ಈ ರಾಜ್ಯದ ರೈತರಿಗೆ ಎಷ್ಟು ಹೊಟ್ಟೆ ಉರಿಬೇಕು? ಎಂದು ಪ್ರಶ್ನಿಸಿದ್ದಾರೆ.

ಕಾವೇರಿ ಕೊಳ್ಳ ಪ್ರದೇಶದ ಜನರಿಗೆ ಕಾವೇರಿ ಪ್ರಾಧಿಕಾರ ನೀಡಿರುವ ಆದೇಶ ಹೊಟ್ಟೆ ಉರಿಯುವಂತೆ ಮಾಡಿದೆ. ಆದ್ದರಿಂದ ಈ ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಾರವಾದ ಸಂದೇಶ ನೀಡಲು ಮೆಣಸಿನಕಾಯಿ ತಿಂದು ಆಕ್ರೋಶ ಹೊರಹಾಕಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಕಾವೇರಿಯನ್ನ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.