ಡೈಲಿ ವಾರ್ತೆ: 30/Sep/2023
ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರ: ದಾವಣಗೆರೆ ಮೂಲದ ಹಿಂದೂ ಸಂಘಟನೆಯ ಸಂಚಾಲಕನ ಬಂಧನ
ಬೆಂಗಳೂರು: ಬುದ್ದಿಜೀವಿ ಸಾಹಿತಿಗಳಿಗೆ ಅನಾಮಧೇಯ ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಾವಣಗೆರೆಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ದಾವಣಗೆರೆಯ ಹಿಂದೂ ಸಂಘಟನೆಯ ಸಂಚಾಲಕ ಶಿವಾಜಿರಾವ್ ಜಾಧವ್ ಬಂಧನಕ್ಕೆ ಒಳಗಾದ ಆರೋಪಿ.
2 ವರ್ಷಗಳಿಂದ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಸಿಬಿ ಎಸಿಪಿ ನವೀನ್ ಕುಲಕರ್ಣಿ ಮತ್ತು ತಂಡ ದಾವಣಗೆರೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪತ್ರದಲ್ಲಿ ಏನಿತ್ತು?
ನಿಮ್ಮನ್ನು ಯಾಕೆ ಕೊಲೆ ಮಾಡಬಾರದು? ನಿಮ್ಮನ್ನು ಯಾಕೆ ಗುಂಡಿಟ್ಟು ಕೊಲ್ಲಬಾರದು? ನೀವು ನಿಮ್ಮ ಕೊನೆ ದಿನಗಳನ್ನು ಎಣಿಸುತ್ತಿದ್ದೀರಿ ಎಂದು ಶಿವಾಜಿ ರಾವ್ ಪತ್ರ ಬರೆಯುತ್ತಿದ್ದ. ಪ್ರತಿ ಬೆದರಿಕೆ ಪತ್ರದಲ್ಲೂ ಒಂದೇ ರೀತಿಯ ಕೈ ಬರಹ ಇತ್ತು. ದಾವಣಗೆರೆಯಿಂದಲೇ ಈ ಪತ್ರಗಳು ಪೋಸ್ಟ್ ಆಗುತ್ತಿದ್ದವು.
ಎರಡು ವರ್ಷಗಳಿಂದ ಬರುತ್ತಿದ್ದ ಅನಾಮಧೇಯ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಏಳು ಎಫ್‌ಐಆರ್ ದಾಖಲಾಗಿತ್ತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಸಿಬಿಗೆ ವರ್ಗಾಯಿಸಿತ್ತು.
ಒಂದೇ ಒಂದು ಕೈಬರಹದಿಂದ ಕೊಲೆ ಬೆದರಿಕೆ ಬಂದಿದೆ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಯಿಂದ ದೃಢಪಟ್ಟಿತ್ತು. ತನಿಖೆಯಿಂದ ದಾವಣಗೆರೆ ಮೂಲದಿಂದ ಪತ್ರ ಬಂದಿದ್ದರೂ ಬೇರೆ ಬೇರೆ ತಾಲೂಕು, ಜಿಲ್ಲೆಗಳಿಗೆ ಹೋಗಿ ಪೋಸ್ಟ್ ಮಾಡಲಾಗಿತ್ತು.
ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ 15ಕ್ಕೂ ಹೆಚ್ಚು ಲೇಖಕರಿಗೆ ಒಂದು ವರ್ಷದಿಂದ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿತ್ತು.