ಡೈಲಿ ವಾರ್ತೆ: 18/OCT/2023
ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸದಿದ್ದರೆ ಅನಿರ್ಧಿಷ್ಣಾವಧಿ ಧರಣಿ. ಎ.ರಾಮಣ್ಣ ವಿಟ್ಲ
ಬಂಟ್ವಾಳ : ಅಕ್ಷರ ದಾಸೋಹ ನೌಕರರಿಗೆ ಬಾಕಿ ಇರುವ ವೇತನ ಕೂಡಲೇ ಪಾವತಿಸುವಂತೆ ಹಾಗೂ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ (ಎ.ಐ.ಸಿ.ಸಿ.ಟಿ.ಯು) ವತಿಯಿಂದ ಬಿ.ಸಿ.ರೋಡ್ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ಚುನಾವಣೆ ಸಂಧರ್ಭದಲ್ಲಿ ಸಂಬಳ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದು ಸರಕಾರವು ಈ ವರೆಗೆ ಏರಿಕೆ ಮಾಡಿರುವುದಿಲ್ಲ ಕೂಡಲೇ ವೇತನ ಏರಿಕೆ ಮಾಡದಿದ್ದಲ್ಲಿ ಅಕ್ಟೋಬರ್ 30 ರಿಂದ ಅನಿರ್ಧಿಷ್ಡಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮುಖಂತರ ಮುಖ್ಯಮಂತ್ರಿಯವರಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಜಯಶ್ರೀ ಆರ್.ಕೆ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಾಣಿಶ್ರೀ , ಮುಖಂಡರಾದ ಜಯಂತಿ ಶಂಭೂರು, ಲಲಿತಾಂಭಿಕೆ, ವನಿತಾ ದಡ್ಡಲಕಾಡು, ಮಾಲತಿ ,ವಿನಯ ನಡುಮೊಗರು, ಮಮತಾ ಬಿಳಿಯೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.