ಡೈಲಿ ವಾರ್ತೆ: 19/OCT/2023
ತಮ್ಮನ ಪ್ರೇಮ ಪ್ರಕರಣ: ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಅಣ್ಣ
ರಾಯಚೂರು: ತಮ್ಮನ ಪ್ರೇಮ ಪ್ರಕರಣದಿಂದ ಬೇಸತ್ತ ಅಣ್ಣ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗವೊಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಮಾನ್ವಿ ಪಟ್ಟಣದ ಕುಂಬಾರ ಓಣಿಯಲ್ಲಿ ಈ ಘಟನೆ ನಡೆದಿದೆ. ಟವರ್ ಏರಿದ ಯುವಕನನ್ನು ಅಮ್ಜದ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಸುಮಾರು ಒಂದು ಗಂಟೆ ಕಾಲ ಟವರ್ ನಲ್ಲೇ ಕಾಲ ಕಳೆದಿದ್ದಾನೆ.
ಘಟನೆ ವಿವರ: ಅಮ್ಜದ್ ಖಾನ್ ಸಹೋದರ ಶೋಯಲ್ ಖಾನ್ ತಮ್ಮದೇ ಸಮುದಾಯದ ಯುವತಿಯನ್ನ ಪ್ರೀತಿಸುತ್ತಿದ್ದನು. ಹಲವು ದಿನಗಳಿಂದ ಶೋಯಲ್ ಖಾನ್ ಪ್ರೀತಿಸಿದ ಯುವತಿ ಜೊತೆ ಮದುವೆ ಮಾಡಿಸುವಂತೆ ಮನೆಯವರನ್ನು ಪೀಡಿಸುತ್ತಿದ್ದನು. ತಮ್ಮನ ಮದುವೆ ವಿಚಾರವಾಗಿ ಪರಿಚಯಸ್ಥರು, ಸಮುದಾಯದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಈ ನಡುವೆ ಕಳೆದ ಹತ್ತು ದಿನಗಳಿಂದ ಯುವಕ-ಯುವತಿ ನಾಪತ್ತೆಯಾಗಿದ್ದರು. ಇದರಿಂದ ಬೇಸತ್ತ ಅಮ್ಜದ್ ಖಾನ್, ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಟವರ್ ಏರಿ ಕುಳಿತಿದ್ದಾನೆ. ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ ಮನವೊಲಿಕೆ ಮಾಡಿದರೂ ಆತ ಕೆಳಗಿಳಿಯಲಿಲ್ಲ. ಕೊನೆಗೆ ಮಾನ್ವಿ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಿ ಟವರ್ ನಿಂದ ಕೆಳಗಿಳಿಸಿದರು.