ಡೈಲಿ ವಾರ್ತೆ: 22/OCT/2023

ರಸ್ತೆಗೆ ಅಡ್ಡ ಬಂದ ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ: ಮೂವರು ಗಂಭೀರ ಗಾಯ!

ಚಿಕ್ಕಮಗಳೂರು: ಅಡ್ಡ ಬಂದ ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತಗೊಂಡ ಘಟನೆ ಕಳಸದ ಸಂಪಿಖಾನ್ ಬಳಿ ನಡೆದಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಲಿಸುತ್ತಿದ್ದ ವೇಳೆ ಹಠಾತ್ ಆಗಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಂಕೆ ದಾಟಿದೆ. ಈ ವೇಳೆ ಕಾರು ಚಾಲಕ ಜಿಂಕೆಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿಯಾಗಿದೆ. ಕೂಡಲೇ ಕಾರಿನಲ್ಲಿದ್ದ ಮೂವರಿಗೆ ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಣಿಪಾಲ್‍ಗೆ ರವಾನಿಸಿದ್ದಾರೆ.
ಕಾರಿನಲ್ಲಿದ್ದವರು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ಮಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.