ಡೈಲಿ ವಾರ್ತೆ: 06/DEC/2023

ಕಾರವಾರ: ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬಿ ಸಮುದ್ರದಲ್ಲಿ ದಾರಿ ತಪ್ಪಿದ್ದ ಬೋಟನ್ನು ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರವಾರದ ವಾಣಿಜ್ಯ ಬಂದರಿಗೆ ಕರೆತಂದಿದ್ದಾರೆ.

ಗೋವಾ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದ್ದು, ಇದರಲ್ಲಿದ್ದ 26 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. 3 ಕನ್ನಡಿಗರು ಸೇರಿ 26 ಮಂದಿ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಇದಾಗಿದ್ದು, ಗೋವಾದ ಪಣಜಿ ಮೂಲಕ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಬಳಿ ಮೀನುಗಾರಿಕೆ ನಡೆಸುತಿತ್ತು. ಈ ವೇಳೆ ಎಂಜಿನ್ ಸಮಸ್ಯೆಯಾಗಿ 30 ನಾಟಿಕಲ್ ಮೈಲು ದೂರದವರೆಗೆ ಬೋಟ್ ತೇಲಿ ಹೋಗಿದೆ.

ಇನ್ನು ಬಾಹ್ಯ ಸಂಪರ್ಕ ಕಡಿದುಹೋದ ಹಿನ್ನೆಲೆ 4 ದಿನ ಸಮುದ್ರದಲ್ಲೇ ಕಾಲ ಕಳೆದ ಮೀನುಗಾರರು ಬೇರೆ ಬೋಟು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ಸಂಕಷ್ಟದಲ್ಲಿದ್ದರು. ಇಂದು ಬೆಳಗ್ಗೆ ಬೋಟಿನ ಲೋಕೇಶನ್ ಪತ್ತೆಹಚ್ಚಿದ ಕೋಸ್ಟ್‌ಗಾರ್ಡ್‌ನವರು ಮೀನುಗಾರರನ್ನು ಸಂಪರ್ಕಿಸಿ ಸ್ಥಳೀಯ ಮೀನುಗಾರರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಹಾಳಾಗಿದ್ದ ಬೋಟ್ ಅನ್ನು ಮತ್ತೊಂದು ಮೀನುಗಾರಿಕಾ ಬೋಟ್ ಸಹಾಯದಿಂದ ಕಾರವಾರದ ವಾಣಿಜ್ಯ ಬಂದರಿಗೆ ಕರೆತರಲಾಗಿದೆ.