ಡೈಲಿ ವಾರ್ತೆ: 06/DEC/2023
ದಕ್ಷಿಣ ಕನ್ನಡ: 2 ಲಕ್ಷ ರೂ ಮತ್ತು ಸ್ಕೂಟರ್ ಕಳವು ಪ್ರಕರಣ – ಮೋಸ್ಟ್ ವಾಂಟೆಡ್ ಕಳ್ಳನ ಬಂಧನ
ಪುತ್ತೂರು: ವಾರದ ಹಿಂದೆ ಪುತ್ತೂರು ನಗರ ಠಾಣೆ ವ್ಯಾಪ್ತಿಯ ಬಂಟ್ವಾಳ ತಾಲ್ಲೂಕಿನ ಕೆದಿಲದಲ್ಲಿ ನಡೆದಿದ್ದ 2 ಲಕ್ಷ ರೂ ನಗದು ಮತ್ತು ಸ್ಕೂಟಿ ಕಳವು ಪ್ರಕರಣಕ್ಕೆ ಸಂಬ0ಧಿಸಿದ ಆರೋಪಿ, 80ಕ್ಕೂ ಅಧಿಕ ಕಳವು ಪ್ರಕರಣಗಳ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ವಾಟರ್ ಟ್ಯಾಂಕ್ ಸಮೀಪದ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ (ಇತ್ತೆ ಬರ್ಪೆ ಅಬೂಬಕ್ಕರ್) ಬಂಧಿತ ಆರೋಪಿ. ವಾರದ ಹಿಂದೆ ಕೆದಿಲದ ರಫ್ಲಾಕುಂಜ್ ಎಂಬುವರ ಮನೆಯಿಂದ 2 ಲಕ್ಷ, ಇಸುಬು ಬ್ಯಾರಿ ಅವರ ಮನೆಯ ಅಂಗಳದಿ0ದ ಸ್ಕೂಟಿ ಕಳವಾಗಿತ್ತು. ಸ್ಕೂಟಿ ಕಳವು ಮಾಡಿದ್ದ ಆರೋಪಿ, ರಾಕುಂಗ್ ಮನೆಯಿಂದ ನಗದು ಹಣ ಕಳವು ಮಾಡಿ ಸ್ಕೂಟಿಯನ್ನು ಕೆದಿಲ ವ್ಯಾಪ್ತಿಯ ಬೇರೊಂದು ಕಡೆ ನಿಲ್ಲಿಸಿ ಪರಾರಿಯಾಗಿದ್ದ.
ಸೋಮವಾರ ರಾತ್ರಿ ಸ್ಕೂಟಿ ತೆಗೆದುಕೊಂಡು ಹೋಗಲು ಕೆದಿಲಕ್ಕೆ ಬಂದಿದ್ದ ಅಬೂಬಕ್ಕರ್‌ನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಡಿ.19ರವರಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ವಿರುದ್ಧ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಸುರತ್ಕಲ್, ಕಾರ್ಕಳ, ಉಡುಪಿ, ಚಿಕ್ಕಮಗಳೂರಿನಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.