ಡೈಲಿ ವಾರ್ತೆ: 12/DEC/2023
ಬಂಟ್ವಾಳ:ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ ನಗ ನಗದು ಕಳವು – ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ : ಉಂಡ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ ನಗ ನಗದು ಕಳವು ಮಾಡಿದ್ದ ಮಂಜೇಶ್ವರ ಮೂಲದ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತ್ರತ್ವದ ತಂಡ ಬಂಧಿಸಿ, ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಮಂಜೇಶ್ವರ ಮೂಲದ ಪ್ರಸ್ತುತ ಪರಂಗಿಪೇಟೆ ಜುಮಾದಿಗುಡ್ಡೆ ನಿವಾಸಿ ಅಶ್ರಫ್ ಆಲಿ ಮತ್ತು ಬೆಂಗ್ರೆಯ ಕಬೀರ್ ಬಂಧಿತ ಆರೋಪಿಗಳು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಕೋಡಿಮಜಲು ಎಂಬಲ್ಲಿಯ ಇಮಾದ್ ಬಿಲ್ಡರ್ ನ ಮೊಹಮ್ಮದ್ ಜಾಪರುಲ್ಲಾ ಅವರ ಮನೆಯಿಂದ ನಗದು ಹಾಗೂ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು.
ಮೊಹಮ್ಮದ್ ಜಾಪರುಲ್ಲಾ ಅವರ ಜೊತೆಯಲ್ಲಿ ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿದ್ದ ಅಶ್ರಪ್ ಆಲಿ ಎಂಬಾತ ಸುಮಾರು 4-5 ತಿಂಗಳಿಂದ ಕಟ್ಟಡ ಕಾಮಗಾರಿಯ ಜೊತೆ ಅವರ ಮನೆಗೆಲಸ ಕೂಡ ಮಾಡಿಕೊಂಡಿದ್ದ.
ಜಾಪರುಲ್ಲಾ ಮತ್ತು ಅವರ ಮನೆಯವರು ಅ.18 ರಂದು ಸಂಬಂದಿಕರ ಮನೆಗೆ ಹೋಗುವಾಗ ಆಶ್ರಫ್ ನಲ್ಲಿ ಮನೆಯ ಬೀಗದ ಕೀಯನ್ನು ನೀಡಿದ್ದರು.
ಆ. 23 ರಂದು ಕೋಡಿಮಜಲು ಮನೆಗೆ ಬಂದಾಗ ಅಶ್ರಫ್ ಕಾಣೆಯಾಗಿದ್ದು, ನಗದು ರೂಪಾಯಿ 2750000/- ಹಾಗೂ 496000 /-ಮೌಲ್ಯದ ಚಿನ್ನಾಭರಣ ಗಳನ್ನು ಕಳವಾಗಿರುವ ಬಗ್ಗೆ ಗಮನಕ್ಕೆ ಬಂದು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ದಾಖಲಾಗಿತ್ತು.
ಆರೋಪಿ ಅಶ್ರಪ್ ಆಲಿ ಮತ್ತು ಬೆಂಗ್ರೆಯ ಕಬೀರ್ ಎಂಬಾತನನ್ನು ಪೊಲೀಸರು ಪತ್ತೆ ಹಚ್ಚಿ ಸುಮಾರು 4,50,000/- ಮೌಲ್ಯ ಚಿನ್ನ ಮತ್ತು ನಗದು 4,00,000/-ದನ್ನು ವಶಪಡಿಕೊಂಡಿರುತ್ತಾರೆ.