
ಡೈಲಿ ವಾರ್ತೆ: ಫೆ./04/2026
ಜಾತಕದ ನೆಪದಲ್ಲಿ ಲೈಂಗಿಕ ದೌರ್ಜನ್ಯ: ದೇವಸ್ಥಾನದ ಅರ್ಚಕನ ಬಂಧನ

ಚಿಕ್ಕಮಗಳೂರು: ಮದುವೆಗೆ ಸಿದ್ಧವಾಗಿದ್ದ ಯುವತಿಯೊಬ್ಬಳು ಜಾತಕ ತೋರಿಸಲು ದೇವಸ್ಥಾನಕ್ಕೆ ತೆರಳಿದ್ದ ವೇಳೆ, ಅರ್ಚಕನಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾದ ಗಂಭೀರ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೊರಟ್ಟಿ ಗ್ರಾಮದ ಪುರಾತನ ಈಶ್ವರ–ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ವಿರುದ್ಧ ಈ ಆರೋಪ ಕೇಳಿಬಂದಿದೆ.
ನೊಂದ ಯುವತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯಂತೆ, 2025ರ ನವೆಂಬರ್ 23ರಿಂದ 2026ರ ಫೆಬ್ರವರಿ 2ರವರೆಗೆ ಜಾತಕದಲ್ಲಿ ದೋಷವಿದೆ, ಅದಕ್ಕೆ ಪರಿಹಾರ ಮಾಡಬೇಕೆಂದು ಹೆದರಿಸಿ ಅರ್ಚಕ ಯುವತಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪವಿದೆ.
ಈ ಸಂಬಂಧ ಬಣಕಲ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.