ಡೈಲಿ ವಾರ್ತೆ: ಫೆ./04/2026

ಸೇನಾಪುರ| ತೆಂಗಿನ ಕಾಯಿ ಕೀಳುವ ವೇಳೆ ಕಾಲುಜಾರಿ ಬಿದ್ದು ಕೃಷಿಕ ಸಾವು

ಕುಂದಾಪುರ: ತೆಂಗಿನ ಮರ ಹತ್ತಿ ಕಾಯಿಗಳನ್ನು ಕೀಳುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಕೃಷಿಕರೊಬ್ಬರು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತರನ್ನು ರಾಜೀವ ಶೆಟ್ಟಿ (58) ಎಂದು ಗುರುತಿಸಲಾಗಿದೆ. ಇವರು ಸೇನಾಪುರ ಗ್ರಾಮದ ಬೆಳ್ಳಾಡಿಯ ನಡುಗಿನ ಮನೆ ಎಂಬಲ್ಲಿರುವ ತಮ್ಮ ಮನೆಯಲ್ಲಿ ಫೆ. 03 ರಂದು ಸಂಜೆ ವೇಳೆ ತೆಂಗಿನ ಮರ ಹತ್ತಿದ ಸಂದರ್ಭ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

ಪರಿಣಾಮವಾಗಿ ಕುತ್ತಿಗೆಯ ಹಿಂಭಾಗಕ್ಕೆ ತೀವ್ರ ಒಳನೋವು ಹಾಗೂ ಕಾಲಿಗೆ ರಕ್ತಗಾಯ ಉಂಟಾಗಿದೆ. ಗಂಭೀರವಾಗಿ ಗಾಯಗೊಂಡ ರಾಜೀವ ಶೆಟ್ಟಿಯವರನ್ನು ತಕ್ಷಣ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 01/2026 ಅಡಿಯಲ್ಲಿ BNSS ಕಲಂ 194ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.