ಡೈಲಿ ವಾರ್ತೆ: 18/DEC/2023
ಬೆಣ್ಣೆಕುದ್ರು: ಶ್ರೀ ಕುಲಮಹಾಸ್ತ್ರೀ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬಾರಕೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಶನಿವಾರ ಹಾಗೂ ಭಾನುವಾರ ಶ್ರದ್ಧಾ ಭಕ್ತಿಯಿಂದ ಜರಗಿತು.
16 ರಂದು ಶನಿವಾರ ರಾತ್ರಿ 7 ಗಂಟೆಗೆ ಗುರುಮಠದ ಮೂಲ ಮನೆಯಲ್ಲಿ ತುಳಸಿ ಪೂಜೆ ರಾತ್ರಿ 10 ಗಂಟೆಗೆ ಕೆಂಡಸೇವೆ ಸೇವೆ, ರಂಗಪೂಜೆ ಹಾಗೂ ತುಳಸಿ ಪೂಜೆ ನಡೆಯಿತು.
17 ರಂದು ಭಾನುವಾರ ಪೂರ್ವಾಹ್ನ ಪರಿವಾರ ದೇವರ ನೃತ್ಯಸೇವೆ, ಮಧ್ಯಾಹ್ನ ತುಲಾಭಾರಾದಿ ಹರಕೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ಸೆಡಿಪೂಜೆ, ಮೊಗವೀರ ಯುವಕ ಸಂಘದಿಂದ ಸಾಂಸ್ಕೃತಿಕ ವೈವಿಧ್ಯ ನೆರವೇರಿತು.
ಆಡಳಿತ ಮಂಡಳಿ ಪ್ರಮುಖರು, ಮೊಗವೀರ ಮಹಾಜನ ಸಂಘ, ಮೊಗವೀರ ಸಂಯುಕ್ತ ಸಭಾದ ಪದಾಧಿಕಾರಿಗಳು, ಗುರಿಕಾರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಹಸ್ರಾರು ಭಕ್ತರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಉದ್ಯಮಿ ಆನಂದ ಸಿ. ಕುಂದರ್ ಪ್ರಾಯೋಜಕತ್ವದಲ್ಲಿ ಭಕ್ತರಿಗೆ ಸುಮಾರು 5,000 ಬಟ್ಟೆ ಚೀಲ ಕೊಡುಗೆಯಾಗಿ ನೀಡಲಾಯಿತು.
18ರ ಪೂರ್ವಾಹ್ನ ಪರಿವಾರ ದೇವರ ನೃತ್ಯಸೇವೆ, ಅಪರಾಹ್ನ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ, ಸಂಜೆ ಮೊಗವೀರ ಮಹಿಳಾ ಸಂಘದಿಂದ ಸಾಂಸ್ಕೃತಿಕ ವೈವಿಧ್ಯ, 19ರ ಪೂರ್ವಾಹ್ನ ಶ್ರೀ ನಾಗದೇವರ ದರ್ಶನ, ಮಹಾಪೂಜೆ, ಹಸಲ ದೈವ ಮತ್ತು ಕೋಳಿಯಾರ ದೈವದ ಪೂಜೆ, ರಾತ್ರಿ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ, 20ರ ಪೂರ್ವಾಹ್ನ ಮಲೆಸಾವಿರ ದೈವ ದರ್ಶನ, ಹಾಲಾವಳಿ ಜರಗಲಿದೆ.