ಡೈಲಿ ವಾರ್ತೆ: 17/DEC/2023

ಶಿರಸಿ: ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಒಂದೇ ಕುಟುಂಬದ ಐವರು ಸಾವು!

ಶಿರಸಿ: ಪ್ರವಾಸಕ್ಕೆಂದು ನದಿ ತೀರಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯ ಭೀಮನಗುಂಡಿಯಲ್ಲಿ ಭಾನುವಾರ ನಡೆದಿದೆ.

ಮೃತರು ಶಿರಸಿಯ ರಾಮನಬೈಲ್ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.

ಮಗುವೊಂದು ಆಡುವಾಗ ನದಿಗೆ ಬಿದ್ದಿದ್ದು ಮಗು ರಕ್ಷಣೆಗಾಗಿ ಸಲೀಮ್ ಕಲೀಲ್ ನದಿಗೆ ಧುಮುಕಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಉಳಿದವರೂ ನದಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ಮಗು ರಕ್ಷಣೆ ಮಾಡಿದ ಸಲೀಮ್ ಉಳಿದವರನ್ನು ಸಹ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ನೀರಿಗಿಳಿದ ಎಲ್ಲರೂ ಮುಳುಗಿ ಸಾವು ಕಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಲೀಮ್ ಕಲೀಲ್ ರೆಹಮಾನ್, ನಾದಿಯಾ ನೂರ್ ಶವವನ್ನು ಹೊರಕ್ಕೆ ತೆಗೆದಿದ್ದು, ಮೂರು ಜನರ ಶವ ಪತ್ತೆಯಾಗಬೇಕಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐದು ಜನ ನೀರಿನಲ್ಲಿ ಸಾವು ಕಂಡವರು ಒಂದೇ ಕುಟುಂಬದವರಾಗಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ಹಸಮಣೆ ಏರಿ ಕುಟುಂಬದ ಕನಸು ಕಂಡಿದ್ದ ಶಿರಸಿಯ ನಾದಿಯಾ ನೂರ್ ಮಗು ರಕ್ಷಣೆ ಮಾಡಲು ಹೋಗಿ ಸಾವು ಕಂಡಿದ್ದು ವಿಧಿಯಾಟವೇ ಸರಿ.