ಡೈಲಿ ವಾರ್ತೆ: 19/DEC/2023
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ಶುರು: ಗುರುವಾರ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ಶುರು ಮಾಡಿದೆ. ಅದಕ್ಕಾಗಿ ಗುರುವಾರ (ಡಿ.21) ದೆಹಲಿಯ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ಕರೆದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕಾರಿಣಿ ಸಭೆ ಕರೆದಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ. ಇದರೊಂದಿಗೆ ಎಲ್ಲಾ ರಾಜ್ಯಗಳ ಪ್ರಮುಖ ನಾಯಕರು ಹಾಗೂ ರಾಜ್ಯಾಧ್ಯಕ್ಷರು ಭಾಗಿಯಾಗಲಿದ್ದಾರೆ.
ಮಂಗಳವಾರ (ಡಿ.19) ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸಭೆ ನಡೆಯಲಿದ್ದು, ಇತ್ತಿಚೇಗೆ ಮುಕ್ತಾಯಗೊಂಡ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ತೆಲಂಗಾಣ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.
ರಾಜ್ಯವಾರು ನಾಯಕರಿಗೆ ಹೈಕಮಾಂಡ್ ಟಾರ್ಗೆಟ್?
2024ರ ಲೋಕಸಭಾ ಚುವಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ರಾಜ್ಯವಾರು ನಾಯಕರಿಗೆ ಟಾರ್ಗೆಟ್ ನೀಡಲು ಮುಂದಾಗಿದೆ. INDIA ಒಕ್ಕೂಟ ನೆರವಿನೊಂದಿಗೆ ಬಿಜೆಪಿ ವಿರುದ್ಧ ಅಜೆಂಡಾ ರೂಪಿಸುವುದು, ಈ ಮೂಲಕ ಕಾಂಗ್ರೆಸ್ ಬಲಿಷ್ಠ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪಿನೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಕೈ ನಾಯಕರು ಇಟ್ಟುಕೊಂಡಿದ್ದಾರೆ. ಆದ್ದರಿಂದ ಉತ್ತರ ಭಾರತದಲ್ಲಿ ಜನಾದೇಶ ಗಳಿಸಲು ವಿಫಲವಾಗಿರುವ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವ ಬಗ್ಗೆಯೂ ವರ್ಕಿಂಗ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.