ಡೈಲಿ ವಾರ್ತೆ: 28/DEC/2023
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಲೆ ತಂದವರಿಗೆ 1ಕೋಟಿ ರೂ. ಬಹುಮಾನ ಘೋಷಣೆ
ಹೈದರಾಬಾದ್: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಟಿಡಿಪಿ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಮಾ ನಿರ್ದೇಶನ ಮಾಡಿರುವ ವ್ಯೂಹಂ ಸಿನಿಮಾ ರಿಲೀಸ್ ಮಾಡದಂತೆ ಪ್ರತಿಭಟಿಸಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದೊಂದಿಗಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿರುವ ಟಿಡಿಪಿ ಮುಖಂಡ ಕೋಲಿಕಪುಡಿ ಶ್ರೀನಿವಾಸ್ ನಾಯ್ಡು ಎಡವಟ್ಟಿನ ಹೇಳಿಕೆಯನ್ನು ನೀಡಿದ್ದಾರೆ. ವರ್ಮಾ ತಲೆ ಕಡಿದು ತಂದಿವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ನಿನ್ನೆಯಷ್ಟೇ ರಾಮ್ ಗೋಪಾಲ್ ವರ್ಮಾ ಕಚೇರಿಗೆ ಟಿಡಿಪಿ ಕಾರ್ಯಕರ್ತರು ಮತ್ತು ಎನ್.ಟಿ.ಆರ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಹೈದರಾಬಾದ್ ನಲ್ಲಿರುವ ವರ್ಮಾ ಅವರ ಡೆನ್ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ವ್ಯೂಹಂ ಸಿನಿಮಾದ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಆಗ ಸಿನಿಮಾಗಳ ಮೂಲಕ ಸಖತ್ ಸುದ್ದಿ ಆಗುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ವಿವಾದಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಸದ್ಯ ವರ್ಮಾ ‘ವ್ಯೂಹಂ’ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾಗೆ ಆಂಧ್ರದ ಟಿಡಿಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಒತ್ತಡ ಹಾಕಿದ್ದಾರೆ.
ಆಂಧ್ರ ಪ್ರದೇಶ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ವ್ಯೂಹಂ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನವನ್ನು ಆಧರಿಸಿದ ಸಿನಿಮಾವಾಗಿದ್ದು, ಚಂದ್ರಬಾಬು ನಾಯ್ಡು ಅವರನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನುವುದು ಟಿಡಿಪಿ ಸದಸ್ಯರ ಆರೋಪ. ಈ ಕಾರಣದಿಂದಾಗಿ ಚಿತ್ರಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಜೈಲಿಗೆ ಹೋಗಿ ಬಂದಿದ್ದಾರಲ್ಲ, ಆ ದೃಶ್ಯವನ್ನೂ ಸೇರಿಸಲಾಗಿದೆಯಂತೆ. ಇವೆಲ್ಲವೂ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎನ್ನುವ ಕಾರಣದಿಂದಾಗಿ ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್, ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದು, ಈ ಚಿತ್ರವನ್ನು ಸೆನ್ಸಾರ್ ಮಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ರಾಜಕೀಯ ಕಿತ್ತಾಟಗಳು ಏನೇ ಇದ್ದರೂ, ಈ ಸಿನಿಮಾವನ್ನು ತಾವು ಬಿಡುಗಡೆ ಮಾಡುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. ಒಬ್ಬ ಸಿನಿಮಾ ಮೇಕರ್ ಆಗಿ ನನ್ನ ಕೆಲಸ ಮಾಡಿದ್ದೇನೆ. ಜನರು ಎಲ್ಲವನ್ನೂ ತೀರ್ಮಾನ ಮಾಡಲಿ ಎಂದಿದ್ದಾರೆ.