ಡೈಲಿ ವಾರ್ತೆ: 29/DEC/2023
ಚೆಕ್ ಬೌನ್ಸ್ ಕೇಸ್: ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.
2011 ರಲ್ಲಿ ಆಕಾಶ್ ಆಡಿಯೋ ಪರವಾಗಿ ರಾಜೇಶ್ ಎಕ್ಸ್‌ಪೋರ್ಟ್ ಕಂಪನಿಯಿಂದ ಮಧುಬಂಗಾರಪ್ಪ 6.60 ಕೋಟಿ ರೂ. ಸಾಲವನ್ನು ಪಡೆದುಕೊಂಡಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಮಧು ಬಂಗಾರಪ್ಪ ಚೆಕ್ ನೀಡಿ ಹಣವನ್ನು ಹಿಂದಿರುಗಿಸಿರಲಿಲ್ಲ.
ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಮೊತ್ತದಲ್ಲಿ ಕೇವಲ 50 ಲಕ್ಷ ರೂ.ವನ್ನು ಮಾತ್ರ ಮರುಪಾವತಿಸಿ ಉಳಿದ ಮೊತ್ತವನ್ನು ಕೊಟ್ಟಿರಲಿಲ್ಲ. ಈ ನಡುವೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿತ್ತು.
ಸುದೀರ್ಘ ವಿಚಾರಣೆ ಬಳಿಕ ಆದೇಶ ನೀಡಿದ ನ್ಯಾಯಾಲಯ ಮಧು ಬಂಗಾರಪ್ಪ ಅವರಿಗೆ 6,96,70,000 ರೂ. ಹಣವನ್ನು ದಂಡವಾಗಿ ಪಾವತಿಸಬೇಕು. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ ಅನುಭವಿಸಲು ಆದೇಶ ನೀಡಿದೆ.
ಈ ದಂಡದ ಹಣದಲ್ಲಿ 6,96,60,000 ರೂ.ದೂರುದಾರರಿಗೆ ಪರಿಹಾರವಾಗಿ ನೀಡಬೇಕು, ಉಳಿದ 10,000 ರೂ. ಸರ್ಕಾರಕ್ಕೆ ದಂಡವಾಗಿ ನೀಡಲು ಆದೇಶವನ್ನು ನೀಡಿದೆ.