ಡೈಲಿ ವಾರ್ತೆ: 01/JAN/2024

ಗಂಗೊಳ್ಳಿ ತೌಹೀದ್‌ ಆಂಗ್ಲ ಮಾಧ್ಯಮ ಪದವಿಪೂರ್ವ ಶಾಲೆಯ ವಿದ್ಯಾರ್ಥಿಗಳಿಂದ ವ್ಯಾಪಾರ ಮಳಿಗೆಗಳು ಮತ್ತು ವಸ್ತು ಪ್ರದರ್ಶನ

ಕುಂದಾಪುರ: ಉಡುಪಿ ಜಿಲ್ಲೆಯ ಗಂಗೊಳ್ಳಿ ತೌಹೀದ್‌ ಆಂಗ್ಲ ಮಾಧ್ಯಮ ಪದವಿಪೂರ್ವ ಶಾಲೆಯ ಪ್ರಾಂಶುಪಾಲರು ಹಾಗೂ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ವಿದ್ಯಾರ್ಥಿ ಗಳಿಂದ ವ್ಯಾಪಾರ ಮಳಿಗೆಗಳು ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವು ಡಿ. 30 ರಂದು ಅದ್ಧೂರಿಯಾಗಿ ಆಯೋಜಿಸಲಾಯಿತು.

ತೌಹೀದ್‌ ಆಡಳಿತ ಸಂಸ್ಥೆಯ ಸದಸ್ಯರಾದ ಇಕ್ಬಾಲ್‌ ಪಿ. ಮೊಹಮ್ಮದ್ ರವರು ಉದ್ಘಾಟಿಸುವ ಮೂಲಕ ತೌಹೀದ್‌ ಪರ್ವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತೌಹೀದ್‌ ಆಡಳಿತ ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಇಬ್ರಾಹಿಂ ಚೌಗುಲೆಯವರು ಹಾಗೂ ಆಡಳಿತ ಸಂಸ್ಥೆಯ ಕರೆಸ್ಪಾಂಡೆಂಟ್‌ ಶ್ರೀಯುತ ಇಮ್ತೀಯಾಜ್‌ ಅಹಮ್ಮದ್‌ ಖಾಝೀಯವರು ಉಪಸ್ಥಿತರಿದ್ದರು.

ಬೆಳಿಗ್ಗೆ 10.30ಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಪಾಲಕರು ಮತ್ತು ಪೋಷಕರ ಆಗಮನದ ನಂತರ ವಿದ್ಯಾರ್ಥಿಗಳು ವ್ಯಾಪಾರ ಚಟುವಟಿಕೆಗಳನ್ನು ಆರಂಭಿಸಿದರು.
ಮಧ್ಯಾಹ್ನ 2.00 ಗಂಟೆಯವರೆಗೆ ಆಯೋಜಿಸಿದ ತೌಹೀದ್‌ ಪರ್ವದಲ್ಲಿ ಹೆತ್ತವರು, ಪೋಷಕರು, ಗಂಗೊಳ್ಳಿಯ, ಪರವೂರಿನ ಸ್ಥಳೀಯರು ಭಾಗವಹಿಸಿ ವಿವಿಧ ವಸ್ತು ಮತ್ತು ಖಾಧ್ಯಗಳನ್ನು ಖರೀದಿಸಿದರು. ತೌಹೀದ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ತೌಹೀದ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ವ್ಯಾಪಾರ ಮಳಿಗೆಗಳನ್ನು, ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಆಕರ್ಷಕ ವಸ್ತು ಪ್ರದರ್ಶನ ನೀಡಿ ನೆರೆದವರ ಕಣ್ಮನ ತಣಿಸಿದರು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಿಭಾಗದೊಂದಿಗೆ ಆಯೋಜಿಸಿದ್ದು, ಹೆಣ್ಣು ಮಕ್ಕಳ ವ್ಯಾಪಾರ ಮಳಿಗೆಗಳಿಗೆ ಗಂಡಸರಿಗೆ ಪ್ರವೇಶವಿರಲಿಲ್ಲ.
ವಿದ್ಯಾರ್ಥಿಗಳು 9.೦೦ ಗಂಟೆಗೆ ಸರಿಯಾಗಿ ಹೆತ್ತವರ ನೆರವಿನೊಂದಿಗೆ ವ್ಯಾಪಾರ ಮಳಿಗೆ ಇಡಲು ಸಜ್ಜಾದರು. ವಿವಿಧ ಆಹಾರ ಪದಾರ್ಥಗಳು. ಖಾದ್ಯಗಳು, ಹಿಜಾಬ್‌, ವಿನ್ಯಾಸ ಬಟ್ಟೆಗಳು, ಕೃತಕ ವಸ್ತುಗಳು, ಕಸೂತಿ ವಸ್ತುಗಳು, ಮೆಹಂದಿ, ಸುಗಂಧ ದ್ರವ್ಯಗಳು, ಸಿಹಿತಿಂಡಿಗಳ ವ್ಯಾಪಾರ ಮಳಿಗೆಗಳನ್ನು ತೆರೆಯಲಾಯಿತು.

ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಾದ ಪಾನಿಪೂರಿ, ಷಾವರ್ಮ, ನೂಡಲ್ಸ್‌, ಪಾವ್‌ಬಾಜಿ, ಕಟ್ಲೇಟ್‌ , ಚೀಸ್‌ ಬಾಲ್‌, ಮಂದಿ ಬಿರಿಯಾನಿ, ಸಮೋಸ, ಕಬಾಬ್‌, ಚಿಕನ್‌ಪ್ರೈ, ಮೊಮೊಸಾ, ಚನ್ನಾ ಬಟಾಣಿ, ಹಣ್ಣುಗಳ ರಸಾಯನ, ಹಣ್ಣುಗಳ ಸಲಾಡ್‌, ಚಾಕ್ಲೇಟ್‌, ಕೇಕ್‌, ಗುಲಾಬ್‌ ಜಾಮೂನ್‌, ಐಸ್‌ಕ್ರೀಮ್‌, ಸವಿಯಾದ ಪಾಯಸ, ಚಿಕನ್‌ರೋಲ್‌ ಮುಂತಾದ ವಿವಿಧ ಖಾದ್ಯಗಳನ್ನು ಮಾರಾಟ ಮಾಡಲಾಯಿತು.
ಕೆಲವು ವ್ಯಾಪಾರ ಮಳಿಗೆಗಳಲ್ಲಿ ಪುಸ್ತಕಗಳು, ಪವಿತ್ರ ಗ್ರಂಥಗಳು ಕಾಣಿಸಿದರೆ ಇನ್ನೂ ಕೆಲವು ವಿವಿಧ ಬಣ್ಣದ ಹಿಜಾಬ್‌, ಕೀಚೈನ್‌, ಬಳೆಗಳು, ಮೆಹಂದಿ, ಉಂಗುರ, ಕೂದಲು ಪಟ್ಟಿ, ಕ್ಲೀಪ್‌, ಕೃತಕ ಆಭರಣಗಳಿಂದ, ಗ್ರಾಹಕರನ್ನು ಮೋಹಕಗೊಳಿಸಿದವು. ಪ್ರತಿ ವಸ್ತುಗಳ ಬೆಲೆಯು ಗ್ರಾಹಕರ ಸಾಮರ್ಥ್ಯಕ್ಕೆ, ನೀರಿಕ್ಷೆಗೆ ನಿಲುಕುವಂತಿದ್ದವು. ವಸ್ತು ಪ್ರದರ್ಶನದಲ್ಲಿ ಜ್ವಾಲಾಮುಖಿ, ಕುತುಬ್‌ಮಿನಾರ್‌, ನೀರು ಸರಬರಾಜು ವಿಧಾನ, ಸೌರ ಮಂಡಲ, ಕಾಬಾ, ಪಿರ್‌ಮಿಡ್‌ ಮತ್ತು ಆಕಾರಗಳು, ಕಿಡ್ನಿಯ ರಚನೆ, ಹಿರೋಶಿಮಾ ಅಣುಬಾಂಬ್‌ ದಾಳಿ, ಸಂಚಾರ ಸಂಕೇತಗಳು, ಕೊರೋನಾ ವೈರಸ್‌ ಮುಂತಾದ ಮಾದರಿಗಳನ್ನು ರಚಿಸಿ ವಿದ್ಯಾರ್ಥಿಗಳು ತಮ್ಮ ಕೈಚಳಕ ಬುದ್ಧಿವಂತಿಕೆ ಪ್ರತಿಭೆಯನ್ನು ಪ್ರದರ್ಶಿಸಿದರು. ಸುಂದರ ಕೈ ಬರಹ, ಕ್ಯಾಲಿಗ್ರಾಫಿ ಮತ್ತು ಕಸದಿಂದ ಉಪಯೋಗಿತವಾಗುವಂತೆ ಮಾಡಿದ ವಸ್ತುಗಳು ಗ್ರಾಹಕರವನ್ನು ಆಕರ್ಷಿಸಿದವು.
ಪ್ರತಿ ವಿದ್ಯಾರ್ಥಿಗಳು ತಮ್ಮ ನಿಜ ಜೀವನದಲ್ಲೂ ಆರ್ಥಿಕ ಚಟುವಟಿಕೆಗಳಲ್ಲಿ ಹೇಗೆ ಪಾಲ್ಗೊಂಡು ಲಾಭ ನಷ್ಟದ ಅರಿವು ಪಡೆಯಬಹುದೆಂಬ ಜ್ಞಾನ ಸಂಪಾಧಿಸಿದರು. ಒಟ್ಟಿನಲ್ಲಿ ತೌಹೀದ್‌ ಪರ್ವವು ವಿದ್ಯಾರ್ಥಿ ವೃಂಧ, ಹೆತ್ತವರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರಿಗೆ ಹೊಸ ಅನುಭವ ನೀಡಿ, ಉತ್ಪಾಧನೆ, ಜಾಹೀರಾತು, ಮಾರಾಟ, ಹಣಸಂಪಾದನೆ, ವ್ಯಾಪಾರ ಮನೋಭಾವ, ಪಡೆಯುವಲ್ಲಿ ಮಹೋನ್ನತ ಪ್ರಯೋಗವಾಗಿ ವ್ಯವಹಾರಿಕ ಜ್ಞಾನ ಅರ್ಜಿಸಿಕೊಳ್ಳುವ ಪ್ರತೀಕವಾಯಿತು.