ಡೈಲಿ ವಾರ್ತೆ: 02/JAN/2024
ಪುತ್ತೂರು, ಮರೀಲ್ ನ ಇ.ಎಸ್.ಆರ್. ಪ್ರೆಸಿಡೆನ್ಸಿ ಶಾಲಾ ವಾರ್ಷಿಕೋತ್ಸವ
ಪುತ್ತೂರು : ಇಲ್ಲಿನ ಮರೀಲ್ ನ ವಿದ್ಯಾಕೀರ್ತಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಧೀನದ ಇ.ಎಸ್.ಆರ್. ಪ್ರೆಸಿಡೆನ್ಸಿ ಶಾಲಾ ವಾರ್ಷಿಕೋತ್ಸವವು ಶಾಲಾ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕೇವಲ 8 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಶಿಕ್ಷಣ ಸಂಸ್ಥೆಯು ಇಷ್ಟೊಂದು ಎತ್ತರಕ್ಕೆ ಬೆಳೆದು ಬಂದಿದೆ ಎಂದಾದರೆ ಶಾಲಾ ಸಂಚಾಲಕ ಝಾಕಿರ್ ಹುಸೈನ್, ಶಾಲಾ ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರ ಶ್ಲಾಘನೀಯ ಎಂದ ಅವರು ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕ ಗಳಿಕೆ ಎಲ್ಲವೂ ಅಲ್ಲ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಪುತ್ತೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಉದ್ಘಾಟಿಸಿದರು. ಶಾಲಾ ಸಂಚಾಲಕ ಝಾಕಿರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಕೂರ್ನಡ್ಕ ಜುಮಾ ಮಸೀದಿ ಅಧ್ಯಕ್ಷ ಕೆ.ಎಚ್. ಕಾಸಿಂ ಧ್ವಜಾರೋಹಣ ನೆರವೇರಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಉಪ್ಪಿನಂಗಡಿ ಅರಫಾ ವಿದ್ಯಾ ಕೇಂದ್ರದ ಸಂಚಾಲಕ ಕೆ.ಪಿ.ಎ. ಸಿದ್ದೀಕ್, ಪುತ್ತೂರು ಪುರಸಭಾ ಸದಸ್ಯ ಮುಹಮ್ಮದ್ ರಿಯಾಝ್ ಕೆ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಹಮೀದ್ ಕೆ.ಎ, ವಾಫಿಯಾ ಕಾಲೇಜು ಸಂಚಾಲಕ ಖಾದರ್ ಕೂರ್ನಡ್ಕ, ಉದ್ಯಮಿಗಳಾದ ಸಿಬಾರಾ ಇಬ್ರಾಹಿಂ ಹಾಜಿ, ಪಿ.ಕೆ. ಝುಬೈರ್ ಮೈಸೂರು, ಜಮಾಲುದ್ದೀನ್ ಮುಕ್ವೆ, ಅಬ್ದುಲ್ಲಾ ಅಳಕೆ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಿರಾಜ್ ಎಂ.ಕೆ, ವಿದ್ಯಾರ್ಥಿ ನಾಯಕರಾದ ಝಿಶಾನ್ ಇಬ್ರಾಹಿಂ, ಎಂ.ಹಸನ್ ಫಾಹ್ಮನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವಿದ್ಯಾಕೀರ್ತಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ವಿ.ಕೆ.ಶರೀಫ್ ಬಪ್ಪಳಿಗೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ತಾಜುನ್ನೀಸಾ ವರದಿ ವಾಚಿಸಿದರು. ಆಯಿಷತ್ ರಿಝಾ ವಂದಿಸಿದರು. ಶಿಕ್ಷಕಿ ಸಯೀದಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಶಾಂತಿ, ರಾಧಾ, ಶಿಫಾನಾ, ರಾಹಿಲಾ ಸಹಕರಿಸಿದರು.