ಡೈಲಿ ವಾರ್ತೆ: 03/JAN/2024

ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಮಾಲೀಕ

ಬೆಳಗಾವಿ: ಮಕ್ಕಳು ಹೂ ಕಿತ್ತಿದ್ದಕ್ಕೆ ಗಾರ್ಡನ್‌ನ ಮಾಲೀಕ, ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ವಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಸುಗಂಧಾ ಮೋರೆ ಸಂತ್ರಸ್ತ ಮಹಿಳೆ. ಕಲ್ಯಾಣಿ ಮೋರೆ ಹಲ್ಲೆ ನಡೆಸಿದ ಆರೋಪಿ.

ಸುಗಂಧಾ ಮೋರೆ ಅವರು ಬಾಸುರ್ತಿ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ದಿನದ ಹಿಂದೆ ಇವರ ಮೇಲೆ ಹಲ್ಲೆ ನಡೆಸಲಾಗಿದೆ. ಮಕ್ಕಳು ಶಾಲೆಯ ಆವರಣದ ಪಕ್ಕದಲ್ಲಿರುವ ಗಾರ್ಡನ್‌ನಲ್ಲಿರುವ ಹೂ ಕಿತ್ತಿದ್ದಕ್ಕೆ, ಅಂಗನವಾಡಿ ಸಹಾಯಕಿ ಸುಗಂಧಾ ಮೇಲೆ ಹಲ್ಲೆ ನಡೆಸಲಾಗಿದೆ. ಅದೇ ಗ್ರಾಮದ ಗಾರ್ಡನ್‌ನ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ಸುಗಂಧಾರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.