ಡೈಲಿ ವಾರ್ತೆ: 03/JAN/2024
ಶ್ರೀಕಾಂತ್ ಪೂಜಾರಿ ವಿರುದ್ಧ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ: ಪೊಲೀಸ್ ಕಮಿಷನರ್
ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿ ಬಂಧನಕ್ಕೆ ಬಿಜೆಪಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ ಶ್ರೀಕಾಂತ್ ಪೂಜಾರಿ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಮಾತನಾಡಿದ್ದಾರೆ.
ಬಿಜೆಪಿ ಪ್ರತಿಭಟನೆ ಹಿನ್ನೆಲೆ ಶಹರ ಠಾಣೆಗೆ ಆಗಮಿಸಿದ್ದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು, ಶ್ರೀಕಾಂತ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳಿವೆ. ಒಟ್ಟು 16 ಪ್ರಕರಣಗಳಿವೆ. ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ ಶಹರ ಠಾಣೆ ಮುಂದೆ ಪ್ರತಿಭಟನೆಗೆ ಬಿಜೆಪಿಗೆ ಸದ್ಯ ಯಾವುದೇ ಅನುಮತಿ ಇಲ್ಲ. ನಾವು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಮೆರವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಬಿಜೆಪಿಯಿಂದ ಶಹರ ಠಾಣೆ ಎದುರು ಪ್ರತಿಭಟನೆ ಹಿನ್ನೆಲೆ ಠಾಣೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಭದ್ರತೆಯ ಸಿದ್ಧತೆ ವೀಕ್ಷಣೆ ಮಾಡಿದರು. ಹಿರಿಯ ಅಧಿಕಾರಿಗಳ ಜೊತೆಗೆ ಭದ್ರತೆ ಬಗ್ಗೆ ಚರ್ಚೆ ನಡೆಸಿದರು. ಮೊಬೈಲ್ ಕಮಾಂಡರ್ ಸೆಂಟರ್‌ನಲ್ಲಿ ಪ್ರತಿಭಟನಾಕಾರರ ಚಲನವಲನ ವೀಕ್ಷಿಸಿದರು.
ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಶಹರ ಠಾಣೆ ಮುಂಭಾಗ ಪ್ರತಿಭಟನೆಗೆ ಬಿಜೆಪಿ ಮುಂದಾಗಿದೆ. ಇಂದು (ಬುಧವಾರ) ಬೆಳಗ್ಗೆ 11:30 ರ ಸುಮಾರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಕಡೆಗೆ ಧಾವಿಸುತ್ತಿದ್ದಾರೆ.
ಏನಿದು ಶ್ರೀಕಾಂತ್ ಪೂಜಾರಿ ಕೇಸ್?
ರಾಜ್ಯದಲ್ಲಿ ಬರೋಬ್ಬರಿ 31 ವರ್ಷಗಳ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ಸಿಕ್ಕಿರುವುದು ನಾನಾ ರೀತಿಯ ಚರ್ಚೆಗೆ ಆಸ್ಪದವಾಗಿದೆ.
ಅಯೋಧ್ಯೆ ಕರಸೇವೆಗೂ ಮುನ್ನ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿತ್ತು. ಒಂದು ಮಳಿಗೆಗೆ ಬೆಂಕಿ ಹಚ್ಚಿದ್ದ ಆರೋಪ ಸಂಬಂಧ 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಮರುಜೀವ ನೀಡಿದ್ದಾರೆ.
ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರವೇ ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ, ಪ್ರಕರಣದ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.