ಡೈಲಿ ವಾರ್ತೆ: 06/JAN/2024

ಬೆನಾಪೋಲ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ – ಇಬ್ಬರು ಮಕ್ಕಳು ಸೇರಿದಂತೆ ಐವರು ಸಜೀವ ದಹನ

ಬಾಂಗ್ಲಾ: ಬೆನಾಪೋಲ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಐವರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡ ಘಟನೆ ಬಾಂಗ್ಲಾದ ಗೋಪಿಬಾಗ್‌ನಲ್ಲಿ ನಡೆದಿದೆ.

ರೈಲಿನಲ್ಲಿ ಕೆಲವು ಭಾರತೀಯರೂ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಬಾಂಗ್ಲಾ ದೇಶದ ಸಾರ್ವತ್ರಿಕ ಚುನಾವಣೆಗೆ ಎರಡು ದಿನಗಳ ಮುನ್ನ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನವಾಗಿದ್ದು, ಕಿಡಿಗೇಡಿಗಳು ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ.

ರೈಲಿನಲ್ಲಿ ಸುಮಾರು 292 ಪ್ರಯಾಣಿಸುತ್ತಿದ್ದರು. ಇದರಲ್ಲಿ ಹೆಚ್ಚಿನವರು ಭಾರತದಿಂದ ಮತ್ತೆ ತಮ್ಮ ಮನೆಗೆ ಮರಳುತ್ತಿದ್ದರು. ರೈಲು ನಿಲ್ದಾಣದ ಸಮೀಪವಿರುವ ಗೋಪಿಬಾಗ್ ಪ್ರದೇಶವನ್ನು ತಲುಪುತ್ತಿದ್ದಂತೆ ರಾತ್ರಿ 9 ಗಂಟೆಯ ಸುಮಾರಿಗೆ ರೈಲಿಗೆ ಬೆಂಕಿ ಹಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಮೈನ್ ಉದ್ದೀನ್ ತಿಳಿಸಿದ್ದಾರೆ. ಘಟನೆಯಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದನ್ನು ರೈಲ್ವೇ ಅಧಿಕಾರಿಗಳು ಖಚಿತಪಡಿಸಿಲ್ಲ. ಬೆಂಕಿಯಿಂದ ಗಾಯಗೊಂಡ ಜನರನ್ನು ಢಾಕಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.