ಡೈಲಿ ವಾರ್ತೆ: 06/JAN/2024

‘ಕಾಂತಾರ’ ಶೂಟಿಂಗ್ ಮುನ್ನ ದೈವಗಳ ದರ್ಶನ ಪಡೆದ ರಿಷಬ್

ರಿಷಬ್ ಶೆಟ್ಟಿ ಅಂಡ್ ಟೀಮ್ ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ ದೈವಗಳ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾದ ಚಿತ್ರೀಕರಣ ನಿರ್ವಿಘ್ನವಾಗಿ ನಡೆಯಲು ಮತ್ತೆ ದೈವಗಳ ದರ್ಶನ ಪಡೆಯುತ್ತಿರುವ ರಿಷಬ್ ಶೆಟ್ಟಿ. ಮಂಗಳೂರಿನ ಗುರುಪುರ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭೇಟಿ ನೀಡಿದ್ದು, ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದಾರೆ.

ಸ್ವಯಂಪ್ರೇರಿತವಾಗಿ ದೈವದ ಅಭಯ ಪಡೆಯಲು ಆಗಮಿಸಿದ ರಿಷಬ್ ಶೆಟ್ಟಿಗೆ, ಧೈರ್ಯ ಕಳೆದುಕೊಳ್ಳದಂತೆ ದೈವದ ಸೂಚನೆ ಸಿಕ್ಕಿದೆ. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ದೈವ ಸೂಚನೆ ನೀಡಿದೆ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿದೆ.

ಈಗಾಗಲೇ ರಿಲೀಸ್ ಆಗಿರುವ ಕಾಂತಾರ ಚಾಪ್ಟರ್ 1 ಸಿನಿಮಾದ ಟೀಸರ್ ಕೋಟಿ ಕೋಟಿ ವೀವ್ಸ್‌ ಪಡೆದಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದರು. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದರು.

‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.
ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.