ಡೈಲಿ ವಾರ್ತೆ: 11/Jan/2024
ವರದಿ: ವಿದ್ಯಾಧರ ಮೊರಬಾ
ಚಿನ್ನ ಕದ್ದ ಯುವತಿಯರಿಗೆ ನ್ಯಾಯಾಂಗ ಬಂಧನ
ಅಂಕೋಲಾ : ಮನೆಯೊಂದರಲ್ಲಿ ಚಿನ್ನ ಕಳ್ಳತನ ಮಾಡಿದ ಇಬ್ಬರು ಯುವತಿಯನ್ನು ಇಲ್ಲಿಯ ಪೊಲೀಸರು ಬಂಧಿಸಿ, ಕಳ್ಳತನ ಮಾಡಿದ ಚಿನ್ನವನ್ನು ವಶಕ್ಕೆ ಪಡೆದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಕೋಟೆವಾಡದ ರೋಮಾನಾ ಮೌಲಾಲಿ ಹುಸೇನಸಾಬ್ (32), ಕಾರವಾರ ತಾಲೂಕಿನ ಅಮದಳ್ಳಿಯ ಮಹಾದೇವವಾಡದ ಸುಮೇಧಾ ದಿಗಂಬರ ಮಹಾಲೆ (27) ಇವರೇ ನ್ಯಾಯಾಂಗ ಬಂಧನಕ್ಕೆ ಒಳಗಾದ ಯುವತಿಯರು.
ಘಟನೆ ವಿವರ : ಪಟ್ಟಣದ ಕೋಟೆವಾಡದ ರಸ್ತೆಗೆ ಹೊಂದಿರುವ ಮನೆಯಲ್ಲಿ ಡಿ.20 ರಂದು ಬೆಳಿಗ್ಗೆ 8.45 ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಾಲಿನಲ್ ಟಿಪಾಯಿ ಮೇಲೆ ಇಟ್ಟಿರುವ 1.30ಲಕ್ಷ ಮೌಲ್ಯದ 34 ಗ್ರಾಂ. ತೂಕದ 2 ಬಳೆ ಮತ್ತು 15 ಸಾವಿರ ಮೌಲ್ಯದ 3 ಗ್ರಾಂ.ನ ಬಂಗಾರದ 1 ಉಂಗುರ ಕಳ್ಳತನವಾಗಿರುವ ಸುಮಿತ್ರಾ ಅಲಿಯಾಸ ಮಂಜುಳಾ ಮಹಾಬಲೇಶ್ವರ ಗಡೇರ ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾಳೆ.
ಪಿಐ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಸುಹಾಸ್ ಆರ್. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. ಆರೋಪಿಗಳು ಕದ್ದ ಬಂಗಾರದ 2 ಬಳೆಗಳನ್ನು ಮಣ ಪುರಂ ಫೈನಾನ್ಸನಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದರು ಮತ್ತು ಉಂಗರುವನ್ನು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನ್ಯೂ ಚಾಮುಂಡೇಶ್ವರಿ ಜ್ಯುವೆಲ್ಲರ್ಸ್‍ಗೆ 13 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಎಎಸ್‍ಐ ಲಲಿತಾ ರಜಪೂತ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಆಸೀಫ್ ಕುಂಕೂರು, ರಾಜೇಶ ಎಚ್.ನಾಯ್ಕ, ಮನೋಜ ಮತ್ತು ಮಹಿಳೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಆರೋಪಿಗಳು ಅಂಬಾರಕೊಡ್ಲದ ಓಂ ಹೋಟೇಲ್ ಎದುರಿನಲ್ಲಿ ಬಟ್ಟೆ ಅಂಗಡಿ ಮಾಡಿ ಕೊಂಡಿದ್ದರು.