ಡೈಲಿ ವಾರ್ತೆ: 19/Jan/2024

ಜ.22 ರಂದು ಶ್ರೀ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗ: ಬಂಟ್ವಾಳ ತಾಲೂಕಿನ‌ ಎಲ್ಲಾ ಅಂಗಡಿ, ವ್ಯವಹಾರ, ಉದ್ಯಮಗಳನ್ನು ಸ್ವಯಂ ಪ್ರೇರಿತವಾಗಿ ಸ್ಥಗಿತ

ಬಂಟ್ವಾಳ : ಜ. 22 ರಂದು ಆಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ತಾಲೂಕಿನ‌ ಎಲ್ಲಾ ಅಂಗಡಿ, ವ್ಯವಹಾರ, ಉದ್ಯಮಗಳನ್ನು ಸ್ವಯಂ ಪ್ರೇರಿತವಾಗಿ ಸ್ಥಗಿತಗೊಳಿಸುವಂತೆ ಅಕ್ಷತೆ ವಿತರಣಾ ಸಮಿತಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಚಾಲಕ ಪ್ರಸಾದ್ ಕುಮಾರ್ ರೈ ವಿನಂತಿಸಿದರು.

ಬಿ.ಸಿ.ರೋಡಿನ ಪ್ರೆಸ್‌ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಕಾರ್ಯಕರ್ತರು ಪ್ರತಿ ಅಂಗಡಿಗಳಿಗೆ ತೆರಳಿ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿಸಿದರು.

ಜ‌.22 ರಂದು ಬೆಳಿಗ್ಗೆ 9 ಗಂಟೆಗೆ ಪ್ರತಿ ಗ್ರಾಮದ ಕೇಂದ್ರಗಳಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಗ್ರಾಮದ ಎಲ್ಲಾ ರಾಮ ಭಕ್ತರು ವಿವಿಧ ಸಂಘಟನೆ , ಸಮಾಜದ ಪ್ರಮುಖರು, ಸಾದು ಸಂತರು, ಒಂದು ಸೇರಿ ರಾಮ ನಾಮ ಜಪ ಹಾಗೂ ಹನುಮಾನ್ ಚಾಲೀಸ್ ಪಠಣಗಳನ್ನು ಮಾಡಲಾಗುತ್ತದೆ, ಪ್ರಾಣಪ್ರತಿಷ್ಠೆಯ ಕಾರ್ಯಕ್ರಮವನ್ನು ಎಲ್.ಇ.ಡಿ ಪರದೆ ಮೂಲಕ ನೇರ ಪ್ರಸಾರ ಮಾಡಲು ಸಿದ್ದತೆ ನಡೆಸಿದೆ. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಕೂಡ ನಡೆಯಲಿದೆ ಎಂದು ತಿಳಿಸಿದರು.

ಸಂಜೆ ಸೂರ್ಯಾಸ್ತದ ಸಮಯದಲ್ಲಿ ಪ್ರತಿ ಮನೆಯಲ್ಲಿ ಐದು ದೀಪಗಳನ್ನು ಉರಿಸಿ, ಉತ್ತರಾಭಿಮುಖವಾಗಿ ಆರತಿ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳಲಾಗಿದೆ. 35 ಕಡೆಗಳಲ್ಲಿ ಪ್ರಮುಖವಾಗಿ ಏಕಕಾಲದಲ್ಲಿ ಕಾರ್ಯಕ್ರಮಗಳು ನಡೆಯಲಿದೆ, ಬಿ.ಸಿ.ರೋಡ್ ಚಂಡಿಕಾ ಪರಮೇಶ್ವರಿ, ಪರಂಗಿಪೇಟೆ ‌ಅಂಜನೇಯ ದೇವಸ್ಥಾನ, ಪೊಳಲಿ ರಾಮಕೃಷ್ಣ ತಪೋವನ ಸೇರಿದಂತೆ ಅನೇಕ ಕಡೆಗಳಲ್ಲಿ 4000 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.

ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ
ಹರೀಶ್ ಅಮ್ಟಾಡಿ, ಪ್ರತೀಕ್ ಬಂಟ್ವಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.