ಡೈಲಿ ವಾರ್ತೆ: 21/Jan/2024

ಜ. 24 ರಂದು ವಿಧಾತ್ರಿ ಕೃಷಿ ಉತ್ಪಾದಕ ಕಂಪನಿ ಉದ್ಘಾಟನೆ

ಕೋಟ: ವಿಧಾತ್ರಿ ಫಾಮರ್ಸ್ ಪ್ರೊಡ್ಯೂಸರ್ ಕಂಪನಿ ನಿ. ಕೋಟ ಇದರ ಉದ್ಘಾಟನೆ ಜ. 24 ರಂದು ಬುಧವಾರ ಬೆಳಗ್ಗೆ 9:30ಕ್ಕೆ ಸಾಲಿಗ್ರಾಮ ಗುರುನರಸಿಂಹ ದೇಗುಲದ ಬಯಲು
ರಂಗಮಂಟಪದಲ್ಲಿ ಜರಗಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನವನೀತ ಶೆಟ್ಟಿ ಜ. 20 ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭ ಕರಂದ್ಲಾಜೆ ಕಂಪನಿಯನ್ನು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂಸ್ಥೆಯ ನೋಂದಣಿ ಬಿಡುಗಡೆ ಮಾಡಲಿದ್ದಾರೆ. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶೇರು ಪ್ರಮಾಣ ಪತ್ರ ಬಿಡುಗಡೆಗೊಳಿಸಲಿದ್ದಾರೆ.

ಕಂಪನಿಯ ಆಡಳಿತ ನಿರ್ದೇಶಕ ಶ್ರಾವಿತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕೇಂದ್ರ ಸರಕಾರದ ಹತ್ತು ಸಾವಿರ ಎಫ್.ಪಿ.ಒ. ಅಡಿಯಲ್ಲಿ ಎಸ್.ಎಫ್.ಎ.ಸಿ. ಮತ್ತು ಐ.ಸಿ.ಸಿ.ಒ.ಸಿ. ಸಂಸ್ಥೆ ಬೆಂಗಳೂರು ಸಹಕಾರದಲ್ಲಿ ಸುಸ್ಥಿರ ಬೆಳವಣಿಗೆಯಡಿಯಲ್ಲಿ ರೈತ ಉತ್ಪಾದಕ
ಸಂಸ್ಥೆಗಳನ್ನು ರಚಿಸುತ್ತಿದ್ದು, ರೈತರ ಸಂಘಟನೆ ಹಾಗೂ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಗಳನ್ನು ನಿಗದಿಪಡಿಸುವ ಮೂಲಕ ಕೃಷಿ ಚಟುವಟಿಕೆಯನ್ನು ಸಮೃದ್ಧಿಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈಗಾಗಲೇ ಗ್ರಾಮ ಮಟ್ಟದಲ್ಲಿ 20
ಸದಸ್ಯರನ್ನೊಳಗೊಂಡ ಸಂಘಗಳನ್ನು ರಚಿಸುತ್ತಿದ್ದು, ಇವುಗಳ ಮೂಲಕ ಕೃಷಿ ಮಾಹಿತಿ ಮುಂತಾದ ಚಟುವಟಿಕೆಗಳನ್ನು ನೀಡಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಂಪನಿ ನಿರ್ದೇಶಕ ರಘು ಮಧ್ಯಸ್ಥ ಪಾರಂಪಳ್ಳಿ, ಶ್ರೀಕಾಂತ್ ಮಯ್ಯ ಕಾಸನಗುಂದು, ಜಿ.ಭರತ್ ಶೆಟ್ಟಿ ಗಿಳಿಯಾರು, ಗಿಳಿಯಾರು ರಾಜಾರಾಮ್ ಶೆಟ್ಟಿ, ಜ್ಯೋತಿ ಗಿಳಿಯಾರು, ಗುಂಪುಗಳ ಸಂಚಾಲಕರಾದ ಶಿವಮೂರ್ತಿ ಕೆ., ಭಾಸ್ಕರ ಶೆಟ್ಟಿ ಮಣೂರು, ಹಂಡಿಕೆರೆ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.