ಡೈಲಿ ವಾರ್ತೆ: 21/Jan/2024

ಶ್ರೀ ಗುರುಸಿದ್ಧ ಮಹಾಸ್ವಾಮಿಗಳು
ಸಾಂಸ್ಕೃತಿಕ ನಾಯಕರೆಂದು ಘೋಷಣೆಗೆ ಲಿಂಗಾಯತ ಸಂಘಟನೆ ವತಿಯಿಂದ ಅಭಿನಂದನಾ ಕಾರ್ಯಕ್ರಮ

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದರ ಪ್ರಯುಕ್ತ ಲಿಂಗಾಯತ ಸಂಘಟನೆ ವತಿಯಿಂದ ಅಭಿನಂದನಾ ಕಾರ್ಯಕ್ರಮ.

ಬಸವಣ್ಣನವರ ತತ್ವ ಆದರ್ಶಗಳ ಪಾಲನೆ ಆಗಬೇಕು – ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು
ಸಾಂಸ್ಕೃತಿಕ ನಾಯಕರೆಂದು ಘೋಷಣೆಗೆ ಅಷ್ಟೇ ಸೀಮಿತವಾಗದೆ ಅವರ ತತ್ವ ಆದರ್ಶಗಳ ಪ್ರಚಾರದ ಜೊತೆಗೆ ಪರಿಪಾಲನೆ ಆಗಬೇಕು, ಅಂದಾಗ ಮಾತ್ರ ಸಮಾಜದಲ್ಲಿ ಸಮತೋಲನ ಕಂಡು ಆದರ್ಶಗಳಿಗೆ ನಾವು ಮನ್ನಣೆ ನೀಡಿದಂತೆ ಆಗುತ್ತದೆ ಎಂದು ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರ ಪ್ರಯುಕ್ತ ರವಿವಾರ ದಿ. 20 ರಂದು ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಮನುಷ್ಯತ್ವದ ದಾರಿ ತೋರಿದವರು ತುಳಿತಕ್ಕೆ ಒಳಗಾದ ಸರ್ವ ಸಮಾಜದವರಿಗೆ ಧ್ವನಿಯಾದ ಬಸವಣ್ಣನವರ ಸಿದ್ಧಾಂತಗಳನ್ನು ಪಾಲಿಸೋಣ ಪರಿಪೂರ್ಣ ಮನುಷ್ಯತ್ವದ ದಾರಿಯನ್ನು ತಿಳಿದು ಬದುಕೋಣ ಮತ್ತು ರಾಜ್ಯ ಸರ್ಕಾರದ ಈ ಘೋಷಣೆ ನಮ್ಮ ಸಮಾಜ ಸೇರಿದಂತೆ ಎಲ್ಲರಿಗೂ ಸಹ ಒಂದು ರೀತಿಯ ಹುಮ್ಮಸ್ಸನ್ನು ತುಂಬಿದೆ ಎಂದರು.

ಅನುಭಾವದ ನುಡಿಗಳನ್ನು ಹೇಳಲು ಆಗಮಿಸಿದ್ದ ಬಸವ ತತ್ವ ಅನುಭಾವ ಕೇಂದ್ರದ ಮಾತೆ ಕುಮುದಿನಿತಾಯಿಯವರು ಮಾತನಾಡಿ ಸಾಂಸ್ಕೃತಿಕ ನಾಯಕ ಎಂದರೆ ಕೇವಲ ಒಂದು ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ ಇಡೀ ಸಾಮಾಜಿಕ ಬದಲಾವಣೆಗಳಿಗೆ ಕಾರಣರಾಗಿ ತನ್ನ ಸಾಹಿತ್ಯದ ಮೂಲಕವೇ ಮನುಕುಲದ ಭಾವಗಳನ್ನು ಮುಗಿಲೆತ್ತರಕ್ಕೆ ಒಯ್ದ ಬಸವಣ್ಣನವರ ಸೇವೆ ಅನನ್ಯ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಮಾತೆ ವಾಗ್ದೇವಿಯವರು ಮಾತನಾಡಿ ನಮ್ಮನ್ನು ನಾವು ತಿದ್ದಿಕೊಳ್ಳುತ್ತ ಬಸವಣ್ಣನವರು ಹಾಕಿಕೊಟ್ಟ ರೀತಿ ನೀತಿಯ ಒಂದು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು. ಅದನ್ನು ಇಂದಿನ ದಿನ ಮನದಟ್ಟು ಮಾಡಿಕೊಂಡು ಮುಂದುವರಿಯೋಣ ಎಂದರು. ಕಾರ್ಯಕ್ರಮದಲ್ಲಿ ಶರಣರಾದ ದಿನೇಶ ಪಾಟೀಲ, ಎಸ್. ಎಸ್. ಪೂಜಾರ, ವಿ.ಕೆ ಪಾಟೀಲ, ಸತೀಶ ಪಾಟೀಲ, ವಿ ಬಿ ದೊಡ್ಡಮನಿ, ಅಕ್ಕಮಹಾದೇವಿ ತೆಗ್ಗಿ, ಸುವರ್ಣಾ ಗುಡಸ, ಸುವರ್ಣಾ ತಿಗಡಿ. ಎಂ ವೈ ಮೆಣಸಿನಕಾಯಿ ಶಿವಾನಂದ ತಲ್ಲೂರ ಬರಮಪ್ಪ ಜೇವಣಿ, ಜಿ ಎಸ್ ಕೋಳಿವಾಡ, ಆನಂದ ಕರ್ಕಿ, ಸುರೇಶ ನರಗುಂದ ಸೇರಿದಂತೆ ಶರಣ ಶರಣರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು, ಶಂಕರ ಗುಡಸ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ದೇವರಮನಿ ಕಾರ್ಯಕ್ರಮ ನಿರೂಪಿಸಿದರು ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.