ಡೈಲಿ ವಾರ್ತೆ: 23/Jan/2024

ರಾಮ ಸಂಕೀರ್ತನೆಯಿಂದ ನಾಡಿಗೆ ಶ್ರೇಯಸ್ಸು -ಡಾ.ಕೆ.ಎಸ್.ಕಾರಂತ

ಸಾಲಿಗ್ರಾಮ: ಪಂಡಿತ ಪಾಮರರೆಂಬ ಭೇದವಿಲ್ಲದೆ ಎಲ್ಲರೂ ಅನುಸರಿಸಬಹುದಾದ, ತನ್ಮೂಲಕ ತ್ರಿಕರಣ ಶುದ್ಧಿ ಮತ್ತು ಯಶೋಸಿದ್ಧಿಯನ್ನು ಸಾಧಿಸಲು ಇರುವ ಸುಲಭ ಮಾಧ್ಯಮ “ಭಜನೆ “ಯಾಗಿದೆಯೆಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ. ಎಸ್. ಕಾರಂತರು ತಿಳಿಸಿದರು.


ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ, ಶ್ರೀ ರಾಮ ಭಜನಾ ಸಂಘ ಸಾಲಿಗ್ರಾಮ, ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಅಯೋಧ್ಯೆಯ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯ ದಿನದಂದು ಶ್ರೀ ದೇವಳದಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಆಯೋಜಿಸಿದ್ದ ನಿರಂತರ “ಶ್ರೀ ರಾಮ ಸಂಕೀರ್ತನೆ”ಯನ್ನು ಉದ್ಘಾಟಿಸುತ್ತಾ ತಿಳಿಸಿದರು.


ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು. ಶ್ರೀ ದೇವಳದ ನಿಗಮಾಗಮ ವೇದಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷದ ನಂತರ ಶ್ರೀ ರಾಮ ಭಜನಾ ಸಂಘದ ಅಧ್ಯಕ್ಷ ಶ್ರೀ ರಾಮದಾಸ ಭಟ್ಟ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪರು ಶುಭಾಶಂಸನೆಗೈದರು. ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಶ್ರೀ ಕೆ. ರಾಜಾರಾಮ ಐತಾಳ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


ಕಾರ್ಯಕ್ರಮಕ್ಕೆ ಮುಂಚಿತವಾಗಿ ಸೀತಾರಾಮಾಂಜನೇಯರ ಫೋಟೋ ದೊಂದಿಗೆ ಮೂರೂ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಭಕ್ತ ವೃಂದದವರು ಶ್ರೀ ಗುರು ನರಸಿಂಹ ದೇವರ ಪ್ರಾಂಗಣದ ಉದ್ದಕ್ಕೂ “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂದು ಭಜಿಸುತ್ತಾ ವೇದಿಕೆಗೆ ಬಂದರು.
ನಿರಂತರ ಭಜನೆಯಲ್ಲಿ ಭಜಕರಾಗಿ ಶ್ರೀ ರಾಮ ಭಜನಾ ಸಂಘ ಸಾಲಿಗ್ರಾಮ,
ಶ್ರೀ ಮಹಾವಿಷ್ಣು ಭಜನಾ ಮಂಡಳಿ ಪಾರಂಪಳ್ಳಿ,
ಶ್ರೀ ರಾಮ ವಿಶ್ವಸ್ಥ ಭಜನಾ ಮಂಡಳಿ ಬಾಳ್ಕುದ್ರು,
ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ ಪಾರಂಪಳ್ಳಿ,
ಶ್ರೀ ಆಂಜನೇಯ ಸೇವಾ ಸಮಿತಿ ಸಾಲಿಗ್ರಾಮ,
ಶ್ರೀ ಶಾರದಾ ಭಜನಾ ಮಂಡಳಿ ಕದ್ರಿಕಟ್ಟು ಕೋಟ, ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಸಾಲಿಗ್ರಾಮ,
ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕಾಕ೯ಡ ಇವರು ಭಜನೆಯಲ್ಲಿ ಪಾಲ್ಗೊಂಡಿದ್ದರು.