ಡೈಲಿ ವಾರ್ತೆ: 24/Jan/2024
ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ
ಬೆಂಗಳೂರು: ಈ ತಿಂಗಳ ಅಂತ್ಯದೊಳಗೆ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಸಲ್ಲಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಅವಧಿ ಮುಗಿಯುವುದರ ಒಳಗಾಗಿ ವರದಿ ನೀಡುತ್ತೇವೆ. ಸರ್ಕಾರ ಯಾವಾಗ ತೆಗೆದುಕೊಳ್ಳುತ್ತದೋ ಆಗ ಕೊಡುತ್ತೇವೆ. ವರದಿ ಫೈನಲ್ ಆಗಿದೆ ಎಂದರು. ಸರ್ಕಾರ ಮತ್ತು ನಮ್ಮ ಮಧ್ಯೆ ಚರ್ಚೆ ಆಗಿದ್ದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವಧಿ ಮುಗಿಯುವುದರ ಒಳಗೆ ನಾವು ಸಲ್ಲಿಕೆ ಮಾಡುತ್ತೇವೆ. ಡೇಟಾ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ಸಮಯಾವಕಾಶ ಪಡೆದುಕೊಂಡೆವು. ವರದಿ ಮುಗಿಯುತ್ತಾ ಬಂದಿದೆ ಎಂದು ಹೇಳಿದರು.
ಇದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಆಗಿರುತ್ತದೆ. ಕಾಂತರಾಜು ವರದಿಯೂ ಅಲ್ಲ, ಹೆಗ್ಡೆ ವರದಿಯೂ ಅಲ್ಲ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ದತ್ತಾಂಶಗಳ ವರದಿ ಇದು. ಹಿಂದುಳಿದ ವರ್ಗಗಳ ವರದಿ. ವರದಿ ಕೊಡುವುದು ಮಾತ್ರ ನಮ್ಮ ಕೆಲಸ. ಸಮುದಾಯಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಕೆಲಸ, ನಮ್ಮದಲ್ಲ. ಸಿಎಂ ಬಳಿ ಸಮಯ ಕೇಳಿದ್ದೇವೆ. ಬಜೆಟ್ ಸಿದ್ಧತೆಯಲ್ಲಿ ಅವರು ಬ್ಯುಸಿ ಇದ್ದಾರೆ ಎಂದರು.
ವರದಿ ಕೊಡುವ ಮೊದಲೇ, ಡೇಟಾ ಕೊಡುವ ಮೊದಲೇ ಚರ್ಚೆಗಳು ನಡೆಯುತ್ತಿವೆ. ಪರ ವಿರೋಧದ ಚರ್ಚೆ ಪಬ್ಲಿಕ್ ಡೊಮೇನ್‌ನಲ್ಲಿ ವರದಿ ಬಹಿರಂಗವಾದ ಬಳಿಕ ನಡೆದರೆ ಒಳ್ಳೆಯದು. ಸರ್ಕಾರಕ್ಕೆ ನಾವು ವರದಿ ಕೊಡುತ್ತೇವೆ. ವರದಿಯನ್ನು ಸರ್ಕಾರ ಕ್ಯಾಬಿನೆಟ್ ಮುಂದೆ ಇಡುತ್ತದೆ. ಡೇಟಾ ಸಂಗ್ರಹ ಮಾಡಿದ ಮೇಲೆ 6 ವರ್ಷಗಳಾಗಿದೆ. ಸರ್ವೆ ಮಾಡಿದಾಗ ಪ್ರತಿ ಮನೆಗೂ ಭೇಟಿ ಕೊಟ್ಟಿದ್ದಾರೆ. ಆಗ ಎಲ್ಲರೂ ಅವರವರ ಜಾತಿಯನ್ನು ಉಲ್ಲೇಖ ಮಾಡಲೇಬೇಕು. ವರದಿಯನ್ನು ವಿರೋಧ ಮಾಡುತ್ತಿರುವವರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ. ಅವರನ್ನೇ ಕೇಳಬೇಕು ಎಂದರು.