ಡೈಲಿ ವಾರ್ತೆ: 27/Feb/2024

ಮಾಣಿ ಬಾಲವಿಕಾಸ ದಲ್ಲಿ “ಭಾವಯಾನ ಗೆಲುವಿನ ಪಯಣ” ಕಾರ್ಯಕ್ರಮ

  • ಹರ್ಯಾಣದಲ್ಲಿ ನಡೆದ ಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ದ್ವಿತೀಯ ಸ್ಥಾನ ಪಡೆದ ಶಿಬಿರಾರ್ಥಿಗಳಿಗೆ ಅಭಿನಂದನೆ

ವಿಟ್ಲ : ಹರ್ಯಾಣದ ಘಟಪುರಿ ಯಲ್ಲಿ ಪೆ. 19 ರಿಂದ 23 ರ ತನಕ ಏಕ್ ಭಾರತ್ ಶ್ರೇಷ್ಠ ಭಾರತ್ ಧ್ಯೇಯದೊಂದಿಗೆ ಭಾರತ್ ಸ್ಕೌಟ್ಸ್ – ಗೈಡ್ಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ವತಿಯಿಂದ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ “ಗೆಲುವಿನ ಪಯಣ ಭಾವಯಾನ ” ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತರಾಜ್ ಕೆ. ಮಾತನಾಡಿ

ಶಿಸ್ತು , ಪರಿಶ್ರಮ ಮೈಗೂಡಿಸಿಕೊಂಡರೆ ಯಶಸ್ಸು ನಿಶ್ಚಿತ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಬಾಲವಿಕಾಸದ 18 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಅಭಿನಂದನಾರ್ಹ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಣಿ ಬಾಲವಿಕಾಸ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಅದ್ಯಕ್ಷ ಜೆ. ಪ್ರಹ್ಲಾದ್ ಶೆಟ್ಟಿ ಬಾಲವಿಕಾಸ ಶಾಲೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ಭಾವೈಕ್ಯತಾ ಶಿಬಿರದ

ಅನುಭವದ ಬಗ್ಗೆ ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ, ಅವರು ಮಾತನಾಡಿ ಈ ಶಿಬಿರದಿಂದ ಜೀವನದಲ್ಲಿ ಮರೆಯಲಾಗದ ಹಲವಾರು ಅನುಭವಗಳು, ಭಾರತದ ವಿವಿಧ ಭಾಗದ ಜನತೆಯ ಭಾವನೆಗಳು, ಆಚಾರ, ವಿಚಾರಗಳು, ಬಾಷೆ, ಆಹಾರ, ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಯವಾಗಲು ಸಾದ್ಯವಾಯಿತು. ಹಾಗೂ ಇಡೀ ಕರ್ನಾಟಕದ ಕಂಪನ್ನು ಪಸರಿಸುವ ಮೂಲಕ ಸಮಸ್ತ ಭಾರತೀಯರ ಮನಸ್ಸನ್ನು ಗೆಲ್ಲುವಲ್ಲಿ ನಾವು ಸಫಲರಾಗಿದ್ದೇವೆ ಎಂದ ಅವರು ಶಾಲಾಡಳಿತ, ವಿದ್ಯಾರ್ಥಿಗಳ ಪೋಷಕರನ್ನು ಅಭಿನಂದಿಸಿದರು.

ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ, ಶಿಕ್ಷಣ ಸಂಯೋಜಕಿ ಸುಧಾ ಪಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ.ಶೆಟ್ಟಿ, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟ ಅಭಿನಂದಿಸಿದರು.

ಆಕರ್ಷಕ ಮೆರವಣಿಗೆ

ಸಭಾ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರಾರ್ಥಿಗಳು ಹಾಗೂ ಶಿಕ್ಷಕರನ್ನು ತೆರೆದ ವಾಹನದಲ್ಲಿ ಸಾಧಕರನ್ನು ಕುಳ್ಳಿರಿಸಿ ಸೂರಿಕುಮೇರಿನಿಂದ ಮಾಣಿ ಪೇಟೆಯಾಗಿ ಆಕರ್ಷಕ ಮೆರವಣಿಗೆಯಲ್ಲಿ ಬಾಲವಿಕಾಸ ಶಿಕ್ಷಣ ಸಂಸ್ಥೆ ಆವರಣಕ್ಕೆ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಸ್ಕೌಟ್ಸ್ ಮತ್ತು ಗೈಡ್ಸ್ , ಕಬ್, ಬುಲ್ ಬುಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಭಿನಂದನೆ
ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ, ಲೇಡಿ ಸ್ಕೌಟ್ ಮಾಸ್ಟರ್ ಸಪ್ನಾ ಪ್ರಸನ್ನ ಸ್ಕೌಟ್ಸ್ ವಿದ್ಯಾರ್ಥಿಗಳಾದ ವರುಣ್, ವರ್ಷಿತ್ ಬಿ.ಎಂ, ಆಶ್ರಯ್ ಎಲ್, ಅಬ್ದುಲ್ ಮಾಹಿಝ್, ದಿಗಂತ್ ಎಸ್, ಸೌರಭ್ ಪ್ರಭು, ಮನ್ವಿತ್ ಕುಲಾಲ್, ದರ್ಶಿಲ್ ಗೈಡ್ಸ್ ವಿದ್ಯಾರ್ಥಿನಿಯರಾದ ಸಾಕ್ಷಿ, ತನ್ವಿ ಎನ್ ಶೆಟ್ಟಿ, ಚಿನ್ಮಯಿ, ಗೌತಮಿ ಪಿ, ರಿಷಿಕಾ ರೈ, ಸಿಂಚನಾಶ್ರೀ ಶೆಟ್ಟಿ, ಸಿಂಚನ, ದಿಶಾ ಎಂ
ಸುಹಾನಿ ಎಸ್ ಶೆಟ್ಟಿ, ನಿವ್ಯಾ ರೈ ಅವರನ್ನು ಅಭಿನಂದಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಉಪಾಧ್ಯಕ್ಷ ಕೆ.ಬಾಲಕೃಷ್ಣ ಆಳ್ವ, ಸ್ವಾಗತಿಸಿ, ಕಾರ್ಯದರ್ಶಿ ಯು.ಶರಣಪ್ಪ ವಂದಿಸಿದರು.
ಲೇಡಿ ಕಬ್ ಮಾಸ್ಟರ್ ಯಮುನಾ ಹಾಗೂ ಫ್ಲಾಕ್ ಲೀಡರ್ ಯಶೋದಾ ಕೆ, ಕಾರ್ಯಕ್ರಮ ನಿರೂಪಿಸಿದರು.