ಡೈಲಿ ವಾರ್ತೆ: 03/Mar/2024

ಕುಂದಾಪುರ ವಕೀಲರ ಸಂಘದ ವಾರ್ಷಿಕೋತ್ಸವ

ಕುಂದಾಪುರದ ವಕೀಲರ ಸಂಘದ ವಾರ್ಷಿಕೋತ್ಸವವು ಕುಂದಾಪುರ ನ್ಯಾಯಾಲಯಗಳ ಆವರಣದಲ್ಲಿ ನಡೆಯಿತು.

“ಸುಮಾರು 28 ವರ್ಷಗಳ ಹಿಂದೆ ಕುಂದಾಪುರದ ಯಡ್ತರೆ ಮಂಜಯ್ಯ ಶೆಟ್ಟಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ನಂತರ ಪುನಃ ಕುಂದಾಪುರಕ್ಕೆ ಬರುವಂತಹ ಅವಕಾಶ ದೊರಕಿರುವುದು ನನ್ನ ಅದೃಷ್ಟ, ಕುಂದಾಪುರ ವಕೀಲರ ಸಂಘವು ನನ್ನ ‘ಹೋಮ್ ಬಾರ್’ ನಂತಿದ್ದು ಇಲ್ಲಿನ ವಕೀಲರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಯಾವತ್ತೂ ಚಿರಋಣಿಯಾಗಿದ್ದೇನೆ, ಹಿರಿಯ ವಕೀಲರಾದ ಶ್ರೀ ಮಟ್ಟಿ ಮಾಧವ ರಾವ್ ಮತ್ತು ಶ್ರೀ ಎ.ಬಿ ಶೆಟ್ಟಿ ಯವರನ್ನು ಸನ್ಮಾನಿಸುವಂತಹ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ, ಕುಂದಾಪುರದಲ್ಲಿ ನಾನು ಕಳೆದ ಕೇವಲ 3 ವರ್ಷಗಳು ಸಾಕಷ್ಟು ಒಳ್ಳೆಯ ನೆನಪುಗಳಿಂದ ಕೂಡಿವೆ, ಕುಂದಾಪುರದ ಜನರ ಪ್ರೀತಿ, ಆತಿಥ್ಯ, ಕುಂದಾಪುರದ ರುಚಿಕರವಾದ ತಿಂಡಿ-ತಿನಿಸುಗಳು ನನ್ನನ್ನು ಆಕರ್ಷಿಸಿವೆ. ನನ್ನ ಸಹಪಾಠಿಗಳಾದ ಯೋಗೀಶ್ ಆಚಾರ್ ಮತ್ತು ಮಹಾಬಲ ರವರನ್ನು ದುರಾದೃಷ್ಟವಶಾತ್ ನಮ್ಮೆಲ್ಲರನ್ನು ಅಗಲಿರುವದು ತುಂಬಾ ನೋವನ್ನು ತಂದಿದೆ. ನನ್ನ ಕಾನೂನು ವಿದ್ಯಾಭ್ಯಾಸವನ್ನು ಕುಂದಾಪುರದಲ್ಲಿ ಮಾಡುವಾಗ ನನಗೆ ಪಾಠ ಮಾಡಿದ ಗುರುಗಳಾದ ಎ.ಬಿ ಶೆಟ್ಟಿ, ಗಿಳಿಯಾರು ಸಂತೋಷ್ ಕುಮಾರ್ ಶೆಟ್ಟಿ, ರವಿಕಿರಣ್ ಮುರ್ಡೇಶ್ವರ, ಶ್ಯಾಮಲ ಭಂಡಾರಿ ಮತ್ತು ಟಿ.ಬಿ. ಶೆಟ್ಟಿ ಯವರನ್ನು ಮನಸಾರೆ ನೆನೆಯುತ್ತೇನೆ. ಇವೆಲ್ಲದಕ್ಕೂ ಅವಕಾಶವನ್ನು ಮಾಡಿಕೊಟ್ಟ ನನ್ನ ಸ್ನೇಹಿತರಾದ ಬನ್ನಾಡಿ ಸೋಮನಾಥ ಹೆಗ್ಡೆ ಯವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಕೇರಳ ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಮಿಸ್ಟರ್ ಜಸ್ಟೀಸ್ ಝಿಯಾದ್ ರೆಹಮಾನ್ ಎ.ಎ. ಹೇಳಿದರು.

ಅವರು ಕುಂದಾಪುರ ವಕೀಲರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ಷಿಕೋತ್ಸವದ ಸಂಚಾಲಕರಾದ ಕಾಳಾವರ ಉದಯ್ ಕುಮಾರ್ ಶೆಟ್ಟಿ “ಯಡ್ತರೆ ಮಂಜಯ್ಯ ಶೆಟ್ಟಿ ಕಾನೂನು ಕಾಲೇಜಿನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಕಾನೂನು ಕ್ಷೇತ್ರದಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿ ಹೆಸರುಗಳಿಸಿರುತ್ತಾರೆ, ಅಂತವರಲ್ಲಿ ಒಬ್ಬರಾದ ಕೇರಳ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ, ಸರಳ ಸಜ್ಜನಿಕೆಯ ಮಿಸ್ಟರ್ ಜಸ್ಟೀಸ್ ಝಿಯಾದ್ ರೆಹಮಾನ್ ಎ.ಎ ರವರನ್ನು ಈ ಕಾರ್ಯಕ್ರಮದ ಉದ್ಘಾಟಕರನ್ನಾಗಿ ಕರೆಸಿರುವುದು ಸ್ತುತ್ಯಾರ್ಹ, ನಾವು ವಕೀಲರ ಸಂಘದಲ್ಲಿ ಈ ಹಿಂದಿನಿಂದಲೂ ಕ್ರೀಡಾಕೂಟ & ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತೇವೆ ಇದರಿಂದಾಗಿ ವಕೀಲರು, ವಕೀಲರ ಕುಟುಂಬ ವರ್ಗದವರು, ನ್ಯಾಯಾಧೀಶರು ಮತ್ತು ಅವರ ಕುಟುಂಬ ವರ್ಗದವರು ಒಟ್ಟಿಗೆ ಸೇರಿ ಸಂತೋಷದಿಂದ, ಅಭಿಮಾನದಿಂದ ಕಾಲಕಳೆಯುವುದು ಒಂದು ಉತ್ತಮ ಬೆಳವಣಿಗೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಇವರು ಮಾತನಾಡಿ “ನಾನು ಬಹಳಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ಆದರೆ ಇವತ್ತಿನ ದಿನ ಗೌರವಾನ್ವಿತ ಉಚ್ಛ ನ್ಯಾಯಾಧೀಶರಾದ ಝಿಯಾದ್ ರೆಹಮಾನ್ ಎ.ಎ ರವರಿಗೆ ಅವರ ಗುರುಗಳನ್ನು ಸನ್ಮಾನಿಸುವಂತಹ ಭಾಗ್ಯ ದೊರೆಯಿತು, ಅಂತಹ ಒಂದು ಸನ್ನಿವೇಶ ಬಹಳ ಕಡಿಮೆ ಇರುತ್ತದೆ. ಇವತ್ತಿನ ಈ ದಿನವನ್ನು ಮರೆಯಲು ಸಾಧ್ಯವಿಲ್ಲ, ಕುಂದಾಪುರ ವಕೀಲರ ಸಂಘ ಮಾಡುತ್ತಿರುವ ಈ ಕಾರ್ಯಕ್ರಮ ಕರ್ನಾಟಕ ರಾಜ್ಯದ ಎಲ್ಲ ವಕೀಲರು ಸಂಘಗಳಿಗೆ ಒಂದು ಮಾದರಿ, ಈ ವರ್ಷದ ಪದಾಧಿಕಾರಿಗಳ ತಂಡ ಒಂದು ಒಳ್ಳೆಯ ತಂಡವಾಗಿದ್ದು ಕಲರವದಂತಹ ಒಂದು ಉತ್ತಮ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಮಾಡಿ, ಕಲೆಯನ್ನು ಪ್ರಚುರಪಡಿಸಿರುತ್ತಾರೆ. ತಾಲೂಕು ಕಾನೂನು ಸೇವಾ ಸಮಿತಿಯ ಎಲ್ಲ ಕಾರ್ಯಚಟುವಟಿಕೆಗಳಿರಲೀ ಅಥವಾ ಲೋಕ ಅದಲಾತ್ ನಂತಹ ಕಾರ್ಯಕ್ರಮವಿರಲೀ ಸಂಪೂರ್ಣ ಸಹಕಾರ ನೀಡಿದ ಈಗಿನ ಆಡಳಿತ ಮಂಡಳಿಗೆ ನ್ಯಾಯಾಧೀಶರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, 2010-12 ರಲ್ಲಿ ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 2016-18 ರಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ನನ್ನನ್ನು 2022-24 ರ ಅವಧಿಗೆ ಪುನಃ ಅಧ್ಯಕ್ಷನನ್ನಾಗಿ ಮಾಡಿ ವಕೀಲರ ಸಂಘದ ಸೇವೆ ಸಲ್ಲಿಸುವ ಅವಕಾಶ ನೀಡಿದ ಎಲ್ಲ ಹಿರಿಯ ಕಿರಿಯ ಹಾಗೂ ಮಹಿಳಾ ವಕೀಲರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು ಹಾಗೂ ಕುಂದಾಪುರ ವಕೀಲರ ಸಂಘಕ್ಕೆ ಒಂದು ಸ್ವಂತ ಕಟ್ಟಡ ಇಲ್ಲವಾಗಿದ್ದು, ನ್ಯಾಯಾಲಯಗಳ ಒಂದು ಕೋಣೆಯಲ್ಲಿ ವಕೀಲರ ಸಂಘ ಇದ್ದಿದ್ದು, ಇದೀಗ ನಮ್ಮ ಸಂಘದ ಸದಸ್ಯರಿಗೆ ಸುಸಜ್ಜಿತವಾದ ವಕೀಲರ ಸಂಘದ ಕಟ್ಟಡ ದೊರಕಿದೆ. ಸದ್ರಿ ವಕೀಲರ ಸಂಘದ ಕಟ್ಟಡಕ್ಕೆ ನಾನು ಸಾಕಷ್ಟು ಪ್ರಯತ್ನವನ್ನು ಪಟ್ಟಿದ್ದು ಅಲ್ಲದೇ, ಬೇರೆ ಬೇರೆ ರೀತಿಯಲ್ಲಿ ಕುಂದಾಪುರ ವಕೀಲರ ಸಂಘಕ್ಕೆ ಉತ್ತಮವಾದ ಸೇವೆಯನ್ನು ಸಲ್ಲಿಸಿದ ಆತ್ಮತೃಪ್ತಿ ಇದೆ ಎಂದರಲ್ಲದೇ ಇದಕ್ಕೆ ಸಾಥ್ ನೀಡಿದ ಹಿಂದಿನ ಅಧ್ಯಕ್ಷರಾದ ಕಾಳಾವರ ಉದಯ್ ಕುಮಾರ್ ಶೆಟ್ಟಿ, ಹಿಂದಿನ ಪ್ರಧಾನ ಕಾರ್ಯದರ್ಶಿಯಾದ ರವೀಶ್ಚಂದ್ರ ಶೆಟ್ಟಿ ಹಾಗೂ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಹಾಗೂ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲ ವಕೀಲರ ಸಹಕಾರವನ್ನು ನೆನಪಿಸಿಕೊಂಡರು.
ಇದೇ ಸಂದರ್ಭ 50 ಕ್ಕೂ ಹೆಚ್ಚು ವರ್ಷಗಳ ಕಾಲ ನ್ಯಾಯವಾದಿಗಳಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ ಕುಂದಾಪುರ ವಕೀಲರ ಸಂಘದ ಹಿರಿಯ ವಕೀಲರುಗಳಾದ ಶ್ರೀ ಮಟ್ಟಿ ಮಾಧವ ರಾವ್ ಮತ್ತು ಶ್ರೀ ಎ.ಬಿ ಶೆಟ್ಟಿ ಯವರನ್ನು ಕೇರಳ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಮಿಸ್ಟರ್ ಜಸ್ಟೀಸ್ ಝಿಯಾದ್ ರೆಹಮಾನ್ ಎ.ಎ. ಮತ್ತು ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವ ಸ್ಮರಣಿಕೆಯನ್ನು ನೀಡಿದರು.
ದಿನಾಂಕ: 04-02-2024 ರಂದು ಕುಂದಾಪುರ ವಕೀಲರ ಸಂಘದ ಸದಸ್ಯರ & ಸದಸ್ಯರ ಕುಟುಂಬ ವರ್ಗದವರ ಹಾಗೂ ನ್ಯಾಯಾಧೀಶರುಗಳ & ನ್ಯಾಯಾಧೀಶರ ಕುಟುಂಬ ವರ್ಗದವರ ಕ್ರೀಡಾಕೂಟ ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದಿದ್ದು, ಅಂದು ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕುಂದಾಪುರ ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೋಸೆಫ್, ಜೊತೆ ಕಾರ್ಯದರ್ಶಿ ರಿತೇಶ್ ಬಿ ಮತ್ತು ಕೋಶಾಧಿಕಾರಿ ಹಾಲಾಡಿ ದಿನಕರ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕುಂದಾಪುರದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್, ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಸಿವಿಲ್ & ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ರೋಹಿಣಿ ಡಿ ಹಾಗೂ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ಜಡ್ಜ್ & ಜಿಲ್ಲಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಅರುಣ ಸೋಮನಾಥ ಹೆಗ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ ಅವರು ಉದ್ಘಾಟಕರಾದ ಕೇರಳ ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಮಿಸ್ಟರ್ ಜಸ್ಟೀಸ್ ಝಿಯಾದ್ ರೆಹಮಾನ್ ಎ.ಎ ರವರನ್ನು ಪರಿಚಯಿಸಿದರು.
ಹಿರಿಯ ವಕೀಲರಾದ ಗಿಳಿಯಾರು ಸಂತೋಷ್ ಕುಮಾರ್ ಶೆಟ್ಟಿ ಸನ್ಮಾನಿತÀ ಹಿರಿಯ ವಕೀಲರಾದ ಶ್ರೀ ಮಟ್ಟಿ ಮಾಧವ ರಾವ್ ರವರ ಹಾಗೂ ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ ಇವರು ಸನ್ಮಾನಿತÀ ಹಿರಿಯ ವಕೀಲರಾದ ಶ್ರೀ ಎ.ಬಿ ಶೆಟ್ಟಿ ಯವರ ಪರಿಚಯ ಭಾಷಣ ಮಾಡಿದರು.
ಕುಂದಾಪುರ ವಕೀಲರ ಸಂಘದಲ್ಲಿ ಅತ್ಯಂತ ಕಾರ್ಯತತ್ಪರತೆಯಿಂದ ಸೇವೆ ಸಲ್ಲಿಸುತ್ತಿರುವ ವಕೀಲರ ಸಂಘದ ಗುಮಾಸ್ತರಾದ ರವಿ ಇವರನ್ನು ಕುಂದಾಪುರ ವಕೀಲರ ಸಂಘದ ವತಿಯಿಂದ ಗೌರವಿಸಲಾಯಿತು.
ಸಭಾಕಾರ್ಯಕ್ರಮದ ನಂತರ ವಕೀಲರು ಮತ್ತು ವಕೀಲರ ಕುಟುಂಬ ವರ್ಗದವರಿಂದ “ಸಾಂಸ್ಕ್ರತಿಕ ಕಾರ್ಯಕ್ರಮ” ಮತ್ತು ವಕೀಲರುಗಳಿಂದ “ಲವ-ಕುಶ ಕಾಳಗ” ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು.


ವಕೀಲರಾದ ಕುಮಾರಿ ವನಿತಾ, ಕುಮಾರಿ ರೇಷ್ಮಾ ಮತ್ತು ಶ್ಯಾಮಸುಂದರ ನಾೈರಿ ಪ್ರಾರ್ಥಿಸಿದರು,
ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು, ವಕೀಲರಾದ ಗಿಳಿಯಾರು ರಾಮಣ್ಣ ಶೆಟ್ಟಿ ಕ್ರೀಡಾ ಪ್ರಶಸ್ತಿ ವಿತರಣೆಯ ಕಾರ್ಯಕ್ರಮ ನಿರ್ವಹಿಸಿದರು, ವಕೀಲರಾದ ಉಮೇಶ್ ಶೆಟ್ಟಿ ಶಾನ್ಕಟ್ ಮತ್ತು ಶ್ರೀಮತಿ ಕೀರ್ತನಾ ಉಮೇಶ್ ಶೆಟ್ಟಿ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಿರ್ವಹಿಸಿದÀರು ಹಾಗೂ ವಕೀಲರಾದ ರಾಘವೇಂದ್ರ ಚರಣ್ ನಾವಡ ಸಭಾ ಕಾರ್ಯಕ್ರಮ ನಿರ್ವಹಿಸಿದರು.